ಕೈದಿಗಳ ದಿನಗೂಲಿ ಹೆಚ್ಚಳ ಮಾಡಿಲ್ಲ – ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟನೆ…
ಜೈಲಿನಲ್ಲಿರುವ ಕೈದಿಗಳಿಗೆ ದಿನಗೂಲಿ ಏರಿಕೆ ಮಾಡಿದ್ದಾರೆ ಎಂಬ ವಿಷಯದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಲವಾರು ಟ್ರೋಲ್ ಮತ್ತು ಮೀಮ್ ಗಳಿಗೆ ಆಹಾರವಾಗಿತ್ತು. ಕೈದಿಗಳ ದಿನಗೂಲಿಯನ್ನ 525 ರೂ.ಗಳಿಗೆ ಏರಿಸಿದ್ದು ಬೇರೆ ಉದ್ಯೋಗಗಳಿಗಿಂತ ಜೈಲುವಾಸವೇ ಲಾಭದಾಯಕ ಎಂಬಂತೆ ಹಲವರು ಸೋಶೀಯಲ್ ಮೀಡಯಾಗಳಲ್ಲಿ ಬೆರದುಕೊಂಡಿದ್ದರು. ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಜೈಲು ಶಿಕ್ಷೆಯಲ್ಲಿರುವ ಹಲವು ಕೈದಿಗಳಿಂದ ಪ್ರತಿದಿನ ದುಡಿಮೆ ಮಾಡಿಸಲಾಗುತ್ತಿದ್ದು, ಪ್ರತಿಯೊಬ್ಬ ಕೈದಿಯೂ ಕೆಲಸ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರ ಕೈದಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಜೈಲುವಾಸದಲ್ಲಿರುವ ಕೈದಿಗಳಿಗೆ ಕೂಲಿ ಹಣವನ್ನು 200 ರೂ.ಗಳಿಂದ ಸ್ವಲ್ಪ ಹೆಚ್ಚಿಗೆ ಮಾಡುವ ಕುರಿತು ಪ್ರಸ್ತಾವನೆ ಮಾಡಲಾಗಿದೆಯೇ ಹೊರತೂ ಅಂತಹ ಆದೇಶ ಇದುವರೆಗೂ ಹೊರಡಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕೈದಿಗಳಿಗೆ ಕೈಮಗ್ಗ, ಕರಕುಶಲ ವಸ್ತುಗಳ ತಯಾರಿಕೆ, ಸೋಪ್, ಮೇಣದಬತ್ತಿ ತಯಾರಿಕೆ ಸೇರಿದಂತೆ ಇಲಾಖೆಗೆ ಸೇರಿದ ಕೃಷಿ ಜಮೀನಿನಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಮಾರಾಟ ಮಾಡಲಾಗುತ್ತದೆ. ಈ ಮೂಲಕ ಇಲಾಖೆಗೆ ಆದಾಯವೂ ಬರುತ್ತಿದೆ.
ಆದರೆ, ಶಿಕ್ಷೆಯಲ್ಲಿರುವ ಕೈದಿಗಳಿಗೆ ಈಗಲೂ ಕೊಡುತ್ತಿರುವುದು ದಿನಕ್ಕೆ 200 ರೂ.ಗಳು. ಅದರಲ್ಲಿ ಊಟದ ಖರ್ಚು 100 ರೂ.ಗಳನ್ನು ಸಹಾ ಕಳೆಯಲಾಗುತ್ತಿದೆ. ಕೈದಿಯಾದ ಮಾತ್ರಕ್ಕೆ ಆತನಿಂದ ಜೀತ ಮಾಡಿಸಿಕೊಳ್ಳುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ.
ಈ ಕಾರಣದಿಂದಾಗಿ ಅವರಿಂದಲೇ ಬರುತ್ತಿರುವ ಲಾಭ ಬಳಸಿ ಅವರಿಗೆ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಮಾಡಲಾಗಿದೆ ಅಷ್ಟೇ. ಕಾರಾಗೃಹವಾಸಿಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಅನಕ್ಷರಸ್ಥರೇ ಇದ್ದಾರೆ. ಹಾಗಾಗಿ ನಾನು ಗೃಹಸಚಿವನಾದ ಬಳಿಕ ಅವರಿಗೆಲ್ಲ ಅಕ್ಷರಾಭ್ಯಾಸ ನಡೆಸುವ ಯೋಜನೆಗೆ ಒತ್ತುಕೊಟ್ಟಿದ್ದು, ಈಗಾಗಲೇ ಬಹಳಷ್ಟು ಪ್ರಗತಿ ಕಂಡುಬಂದಿದೆ ಎಂದು ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ







