ನವದೆಹಲಿಯಲ್ಲಿ ಇಂದು ಜನರಲ್ ಬಿಪಿನ್ ರಾವತ್ ಅಂತ್ಯಸಂಸ್ಕಾರ
ತಮಿಳುನಾಡಿನ ಕಣ್ಣೂರು ಅರಣ್ಯದ ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅಂತ್ಯಕ್ರಿಯೆಯು ಇಂದು ನಡೆಯಲಿದೆ. ನವದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ.
ಅಂತ್ಯ ಸಂಸ್ಕಾರಕ್ಕೂ ಮುನ್ನ ನವದೆಹಲಿಯ ಕಾಮರಾಜ್ ಮಾರ್ಗದರಲ್ಲಿರುವ ನಿವಾಸದಲ್ಲಿ ಜನರಲ್ ರಾವತ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 11 ಗಂಟೆಯಿಂದ 12.30 ರವರೆಗೆ ಗಣ್ಯರು ಮತ್ತು ನಾಗರಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ ಸೇನಾ ಸಿಬ್ಬಂದಿ ಅಂತಿಮ ಗೌರವ ಸಲ್ಲಿಸಲಿದ್ದಾರೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಲಿದೆ. ಅಂತಿಮವಾಗಿ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ಕೊನೆಯ ವಿಧಿ ವಿಧಾನಗಳು ನಡೆಲಿವೆ.
ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ, ಪೈಲಟ್ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಜೂನಿಯರ್ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ ಅವರು ವಿಧಿವಶರಾಗಿದ್ದಾರೆ.
ಈ ಅಫಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.








