ಬಾಲ್ಯವಿವಾಹ ಸಮಾಜದ ಪಿಡುಗು. ಇದು ಹಿಂದೆ ಸಮಾಜವನ್ನು ಹೆಚ್ಚಾಗಿ ಕಾಡಿದ್ದರೆ, ಈಗಲೂ ಹಲವು ಮುಗ್ಧ ಬಾಲಕಿಯರ ಬದುಕನ್ನು ಹಾಳು ಮಾಡುತ್ತಿದೆ. ಹಲವಾರು ಕಾರಣಗಳಿಂದಾಗಿ ಬಾಲಕಿಯರ ಬದುಕನ್ನು ಈ ಬಾಲ್ಯವಿವಾಹ ಕತ್ತಲೆ ಮಾಡುತ್ತಲೇ ಇದೆ. ಕಾನೂನು ಕಠಿಣವಾಗಿದ್ದರೂ ಬಾಲ್ಯವಿವಾಹ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಈ ಮಧ್ಯೆ ಬಾಲ್ಯವಿವಾಹದಿಂದ ತಪ್ಪಿಸಿಕೊಂಡ ಬಾಲಕಿಯೊಬ್ಬಳು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾಳೆ. ಈ ಮೂಲಕ ಬಾಲ್ಯವಿವಾಹ ಎನ್ನುವ ಪಾಲಕರಿಗೆ ಹೆಣ್ಣಿನ ಆಸೆ ಕಮರಿಸಬೇಡಿ, ಚಿಗುರಿಸಿ ಎಂಬ ಸಂದೇಶ ಸಾರಿದ್ದಾಳೆ.
2017ರಲ್ಲಿ ಬಾಲ್ಯ ವಿವಾಹದಿಂದ ತಪ್ಪಿಸಿಕೊಂಡು ಕುಟುಂಬದ ಸದಸ್ಯರಿಂದ ತೊಂದರೆಗೊಳಗಾಗಿದ್ದ ಬಾಲಕಿ ಈಗ ದೇಶದ ಗಮನ ಸೆಳೆದಿದ್ದಾಳೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ಮಂಡಲದ ಪೆದ್ದಹರಿವನಂ ಗ್ರಾಮದ ನಿರ್ಮಲಾ ಎಂಬ ಬಾಲಕಿಯೇ ಈ ಸಾಧನೆ ಮಾಡಿದವಳು. ಆಂಧ್ರಪ್ರದೇಶದ ಪ್ರಥಮ ವರ್ಷದ ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ ಗಮನ ಸೆಳೆದಿದ್ದಾಳೆ. ಈ ಬಾಲಕಿ 10ನೇ ತರಗತಿಯಲ್ಲಿ 537 ಅಂಕ ಪಡೆದಿದ್ದಳು. ಆದರೂ, ಆಕೆಯ ಕುಟುಂಬಸ್ಥರು ಮದುವೆ ಮಾಡಲು ನಿರ್ಧರಿಸಿದ್ದರು.
ಶ್ರೀನಿವಾಸ್ ಮತ್ತು ಹನುಮಂತಮ್ಮ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಅವರ ಕಿರಿಯ ಮಗಳು ನಿರ್ಮಲಾ. ಉಳಿದ ಮೂವರು ಹುಡುಗಿಯರಿಗೆ ಮದುವೆಯಾಗಿದೆ. ನಿರ್ಮಲಾ ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದರೂ ಕುಟುಂಬಸ್ಥರು ಮದುವೆ ಮಾಡಲು ಮುಂದಾಗಿದ್ದರು. ಆದರೂ ಪಟ್ಟು ಬಿಡದ ಬಾಲಕಿ ಓದು ಮುಂದುವರೆಸಿದ್ದಳು. ಆಗ ಅಧಿಕಾರಿಗಳು ಹಾಗೂ ಶಾಸಕ ಸಾಯಿ ಪ್ರಹಾಸ್ ಬೇಟಿ ನೀಡಿ ಓದಿಗೆ ವ್ಯವಸ್ಥೆ ಮಾಡಿದ್ದರು. ಈಗ ಇಡೀ ದೇಶವೇ ಮೆಚ್ಚುವಂತಹ ಕೆಲಸ ಮಾಡಿದ್ದಾಳೆಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.