ಕೋಲ್ಕತ್ತಾ: ಮಹಿಳೆಯರ ಮೇಲೆ ಲೌಂಗಿಕ ದೌರ್ಜನ್ಯ ನಡೆಸಿ ಸಂದೇಶಖಾಲಿಯಲ್ಲಿ ಭೂಮಿ ಕಬಳಿಸುತ್ತಿದ್ದ ಟಿಎಂಸಿ ನಾಯಕ ಶೇಖ್ ಷಹಜಹಾನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ವಶಕ್ಕೆ ಪಡೆಯಲಾಗಿದೆ. ಆತನನ್ನು ಸತತ ನಾಲ್ಕು ಗಂಟೆ ತೀವ್ರ ವಿಚಾರಣೆ ನಡೆಸಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದ್ದು, ಸೋಮವಾರ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಲೈಂಗಿಕ ಕಿರುಕುಳ ನೀಡಿ ಭೂಕಬಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೇಖ್ ಷಹಜಹಾನ್ ವಿರುದ್ಧ ಸಂದೇಶಖಾಲಿಯಲ್ಲಿ ಮಹಿಳೆಯರು ದೊಡ್ಡ ಪ್ರತಿಭಟನೆ ನಡೆಸಿದ್ದರು. ಹಿಂಸಾತ್ಮಕ ಪ್ರತಿಭಟನೆಯ ನಂತರ 55 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಷಹಜಹಾನ್ ನ್ನು ಫೆ. 29ರಂದು ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಜ. 5 ರಂದು ಪಡಿತರ ಹಗರಣದಲ್ಲಿ ಷಹಜಹಾನ್ ನನ್ನು ಬಂಧಿಸಲು ಆತನ ನಿವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಇಡಿ ಅಧಿಕಾರಿಗಳ ತಂಡದ ಮೇಲೆ ಗುಂಪು ದಾಳಿ ನಡೆದಿತ್ತು. ನಂತರ ಷಹಜಹಾನ್ ಪರಾರಿಯಾಗಿದ್ದ. ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಶೇಖ್ ಷಹಜಹಾನ್ ಸದ್ಯ ಜೈಲಿನಲ್ಲಿದ್ದಾನೆ. ಈ ಪ್ರಕರಣವನ್ನು ಮಾರ್ಚ್ 6ರಂದು ಸಿಬಿಐಗೆ ಕೋಲ್ಕತ್ತಾ ಹೈಕೋರ್ಟ್ ವರ್ಗಾಯಿಸಿತ್ತು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಭೂಮಿಯನ್ನು ಕಬಳಿಸಿದ ಸಂದೇಶ್ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ ನನ್ನು 6 ವರ್ಷ ಪಕ್ಷದಿಂದ ಅಮಾನತುಗೊಳಿಸಿ ತೃಣಮೂಲ ಕಾಂಗ್ರೆಸ್ ಆದೇಶಿಸಿದೆ. ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅಲ್ಲಿನ ಮಹಿಳೆಯರು ರೊಚ್ಚಿಗೆದ್ದಿದ್ದರು. ಪ್ರಧಾನಿ ಮೋದಿ ಅವರು ಇಂದು ಕೂಡ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂದೇಶಖಾಲಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ್ದರು. ನಂತರ ಅವರು ಮಮತಾ ಬ್ಯಾನರ್ಜಿ ವಿರುದ್ಧ ಬರಾಸತ್ನಲ್ಲಿ ರ್ಯಾಲಿಯಲ್ಲಿ ಸಂದೇಶಖಾಲಿ ಕುರಿತು ವಾಗ್ದಾಳಿ ನಡೆಸಿದ್ದರು.