ನವದೆಹಲಿ : ಸಿಕ್ಕಿಂ (Sikkim)ನಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ಆತಂಕದ ರೀತಿಯಲ್ಲಿ ಏರಿಕೆಯಾಗುತ್ತಿದೆ.
ಸದ್ಯ ಅಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಸಾವನ್ನಪಿದವರಲ್ಲಿ ಏಳು ಸೈನಿಕರು ಹಾಗೂ ಸ್ಥಳೀಯರು ಸೇರಿದ್ದಾರೆ. ಅಲ್ಲದೇ 140 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆರೆಯ ರಾಜ್ಯ ಪಶ್ಚಿಮ ಬಂಗಾಳದ ತೀಸ್ತಾ ನದಿ ಪಾತ್ರದಲ್ಲಿ 27 ಮೃತದೇಹಗಳು ನಾಪತ್ತೆಯಾಗಿವೆ. ಈ ಪೈಕಿ ಏಳು ಮೃತದೇಹಗಳನ್ನು ಗುರುತಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. 1,173 ಮನೆಗಳಿಗೆ ತೀವ್ರ ರೀತಿಯಲ್ಲಿ ಹಾನಿಯಾಗಿದೆ ಎನ್ನಲಾಗಿದೆ. ಅಲ್ಲದೇ, 2,413 ಜನರನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಲ್ಲದೇ, ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಆತಂಕದಲ್ಲಿ ಬದುಕುವಂತಾಗಿದೆ.