ಭೋಪಾಲ್: ಕಿರಾತಕರು ಗರ್ಭಿಣಿ ಮೇಲೆ ಅತ್ಯಾಚಾರ ನಡೆಸಿ ನಂತರ ಬೆಂಕಿ ಹಚ್ಚಿರುವ ಘಟನೆಯೊಂದು ನಡೆದಿದೆ.
ಸಂಧಾನಕ್ಕೆ ಬಂದಿದ್ದ ಗರ್ಭಿಣಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿ, ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿರುವ ಈ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ನಡೆದಿದೆ.
38 ವರ್ಷದ ಸಂತ್ರಸ್ಥೆಯು ತನ್ನ ಪತಿ ಮಾಡಿದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಂಧಾನ ನಡೆಸಲು ಆರೋಪಿಗಳ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಮೂವರು ಆರೋಪಿಗಳು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಆನಂತರ ಸಂತ್ರಸ್ತ ಮಹಿಳೆಯ ಪತಿಯ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆ, ಗರ್ಭಿಣಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಮಹಿಳೆಗೆ ಶೇ. 80ರಷ್ಟು ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮ್ಯಾಜಿಸ್ಟ್ರೇಟ್ ಬಳಿ ಸಂಸ್ತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಮಹಿಳೆಯ ಪತಿ ಬೇರೊಂದು ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಆ ಮಹಿಳೆ ಮದುವೆಗೆ ಒತ್ತಾಯಿಸಿದಾಗ ಆತ ನಿರಾಕರಿಸಿದ್ದ. ಹೀಗಾಗಿ ಆ ಮಹಿಳೆ ಅತ್ಯಾಚಾರದ ಆರೋಪ ಹೊರಿಸಿದ್ದಳು. ಆಗ ಗರ್ಭಿಣಿ ಸಂಧಾನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.