ಲಖಿಂಪುರ ಹಿಂಸಾಚಾರ ಉದ್ದೇಶ ಪೂರ್ವಕ ಕೃತ್ಯ – SIT ಹೇಳಿಕೆ
ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಹಿಂಸಾಚಾರವನ್ನು ಉದ್ದೇಶ ಪೂರ್ವಕ ಪೂರ್ವ ನಿಯೋಜಿತ ಪಿತೂರಿ ಎಂದು ಎಸ್‌ಐಟಿ ಆರೋಪಿಸಿದೆ. ಅಲ್ಲದೇ ಆರೋಪಿಗಳ ವಿರುದ್ಧದ ಸೆಕ್ಷನ್‌ಗಳನ್ನು ಹೆಚ್ಚಿಸಲು ಅನುಮತಿ ನೀಡುವಂತೆ ಎಸ್‌ಐಟಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅಲಿಯಾಸ್ ಮೋನು ಸೇರಿದಂತೆ 14 ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಸೆಕ್ಷನ್‌ಗಳನ್ನು ಹೆಚ್ಚಿಸಲು ಎಸ್‌ಐಟಿಗೆ ನ್ಯಾಯಾಲಯ ಅನುಮತಿ ನೀಡಬಹುದು ಎಂದು ಹೇಳಲಾಗುತ್ತಿದೆ…
ಮಗನ ಮೇಲಿನ ಸೆಕ್ಷನ್‌ಗಳನ್ನು ಹೆಚ್ಚಿಸಿದ ಸುದ್ದಿ ತಿಳಿದ ಕೂಡಲೇ ಮೋನು ತಂದೆ ಅಜಯ್ ಮಿಶ್ರಾ ಮಧ್ಯಾಹ್ನ 12 ಗಂಟೆಗೆ ಜೈಲಿಗೆ ಬಂದರು. ಮಗನಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮದವವರ ಕ್ಯಾಮರ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದರು. ಮೋನು ಸೇರಿದಂತೆ ಹಿಂಸಾಚಾರದ ಎಲ್ಲಾ 14 ಆರೋಪಿಗಳು ಇಂದು ಸಿಜಿಎಂ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು, ಆದರೆ ಮಧ್ಯಾಹ್ನದವರೆಗೆ ಯಾವುದೇ ಆರೋಪಿಗಳು ನ್ಯಾಯಾಲಯಕ್ಕೆ ಬಂದಿಲ್ಲ.
ಈ ಹಿಂದೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಮೋನು ಸೇರಿದಂತೆ 14 ಆರೋಪಿಗಳ ವಿರುದ್ಧ ಸೆಕ್ಷನ್ 279, 338, 304 ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ನಂತರ, ಎಸ್‌ಐಟಿ ಇದು ಪೂರ್ವ ನಿರ್ಧರಿತ ಪಿತೂರಿ ಎಂದು ಹೇಳಿದೆ. ಈಗ ತನಿಖಾ ಸಂಸ್ಥೆಯು ಸೆಕ್ಷನ್ 307, 326,302,34,120B,147,148,149,3/25/30 ಅಡಿಯಲ್ಲಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೂಡ ಗಮನಹರಿಸಿತ್ತು. ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಮೂರು ಬಾರಿ ವಿಚಾರಣೆ ನಡೆದಿದ್ದು, ನಿಧಾನಗತಿಯ ತನಿಖೆಗಾಗಿ ಎಸ್‌ಐಟಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಈಗ ಎಸ್‌ಐಟಿ ತನಿಖೆಯ ಪ್ರಗತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.
ಅಕ್ಟೋಬರ್ 3 ರಂದು (ಭಾನುವಾರ) ಲಖಿಂಪುರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಿರುದ್ಧ ರೈತರು ಕಪ್ಪು ಬಾವುಟ ತೋರಿಸಿದ್ದರು. ಈ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದ ಕಾರನ್ನ ರೈತರ ಮೇಲೆ ನುಗ್ಗಿಸಲಾಗಿತ್ತು. ನಾಲ್ವರು ರೈತರೊಂದಿಗೆ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಪ್ರಾಣ ಕಳೆದುಕೊಂಡಿದ್ದರು. ಇದರಿಂದ ಕುಪಿತಗೊಂಡ ರೈತರು ವಾಹನದಲ್ಲಿದ್ದ ಕೆಲವರನ್ನು ಥಳಿಸಿದ್ದರು. ಅವರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ಚಾಲಕ ಕೂಡ ಸೇರಿದ್ದ. ಈ ಪ್ರಕರಣದಲ್ಲಿ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 14 ಜನರ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಸಂಚು ಪ್ರಕರಣ ದಾಖಲಾಗಿತ್ತು.