ಪಾಟ್ನಾ : ಬಿಹಾರದ ಮರಂಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ಯುವಕನೊಬ್ಬ ಊಟಕ್ಕೆ ಬಲವಂತ ಮಾಡಿದ ಕಾರಣ ಹೆತ್ತ ತಾಯಿಗೆ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು 20 ವರ್ಷದ ಅಂಗಾದ್ ಯಾದವ್ ಎಂದು ಗುರುತಿಸಲಾಗಿದೆ. ಸದ್ಯ ಪಿಸ್ತೂಲ್ ಸಮೇತ ಯುವಕನನ್ನು ಮರಂಚಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಮಂಗಳವಾರ ರಾತ್ರಿ 10.30 ಸುಮಾರಿಗೆ ಆರೋಪಿ ಯಾದವ್ ಮನೆಯ ಹೊರಗೆ ತನ್ನ ಕೆಲ ಸ್ನೇಹಿತರೊಂದಿಗೆ ನಿರಂತರವಾಗಿ ಚಾಟಿಂಗ್ ಮಾಡುತ್ತ ಬ್ಯುಸಿಯಾಗಿದ್ದ. ಸಮಯ ಆಗುತ್ತಿದ್ದ ಕಾರಣ ಯಾದವ್ ತಾಯಿ ಮಂಜು ದೇವಿ ಒಳಗೆ ಬಂದು ಊಟ ಮಾಡುವಂತೆ ಹಲವು ಬಾರಿ ಕರೆದಿದ್ದಾರೆ. ಆದ್ರೆ ಯಾದವ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಚಾಟಿಂಗ್ ನಲ್ಲೇ ನಿರತವಾಗಿದ್ದ. ಕೊನೆಗೆ ತಾಯಿ ಮಂಜು ದೇವಿ ಯಾದವ್ ಬಳಿ ಹೋಗಿ ಮತ್ತೆ ಊಟಕ್ಕೆ ಬರುವಂತೆ ಆತನ ಕೈ ಹಿಡಿದು ಕರೆತಂದಿದ್ದಾರೆ. ಇದರಿಂದ ಕುಪಿತಗೊಂಡ ಯಾದವ್, ಮಂಜು ದೇವಿ ಅವರಿಗೆ ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದಾನೆ. ಕೂಡಲೇ ಮಂಜು ದೇವಿ ಕುಸಿದು ಬಿದ್ದಿದ್ದಾರೆ. ಸದ್ಯ ಅವರಿಗೆ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.








