ಬೆಂಗಳೂರು : ಹೃದಯ ವೈಶಾಲ್ಯವುಳ್ಳವರಿಗೆ ಟಿಪ್ಪು ಉತ್ತಮನೂ, ಜಾತಿ ಧರ್ಮದ ವೈರಸ್ ಅಂಟಿದವರಿಗೆ ಟಿಪ್ಪು ವಿರೋಧಿಯಾಗಿಯೂ ಕಾಣುತ್ತಾನೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ವಿಶ್ವನಾಥ್ ಹೇಳಿಕೆ ಬಗ್ಗೆ ಮಾತನಾಡಿದ ಇಬ್ರಾಹಿಂ, ಹೆಚ್.ವಿಶ್ವನಾಥ್ ಪುಸ್ತಕ ಬರೆದವರು, ಇತಿಹಾಸ ಅರಿತವರು. ವಿಶ್ವನಾಥ್ ಯಾವ ಪಕ್ಷದಲ್ಲಿದ್ದಾರೆ ಎನ್ನುವುದೀಗ ಮುಖ್ಯವಲ್ಲ. ಯಡಿಯೂರಪ್ಪನವರೇ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ರಾಷ್ಟ್ರಪತಿಗಳು ಸಹ ಟಿಪ್ಪು ಗುಣಗಾನ ಮಾಡಿದ್ದರು. ಟಿಪ್ಪುವನ್ನು ಕಾಂಗ್ರೆಸ್ ನ ವೋಟ್ ಬ್ಯಾಂಕ್ ಎಂದು ಬಿಜೆಪಿಗರು ದೂರುತ್ತಿದ್ದರು. ಶೃಂಗೇರಿ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿದರೆ ಹೇಳುತ್ತಾರೆ. ನಂಜನಗೂಡು ದೇಗುಲದ ಬಗ್ಗೆ ಟಿಪ್ಪು ಹೇಗೆ ನಡೆದುಕೊಂಡಿದ್ದ ಎನ್ನುವುದು ಗೊತ್ತಾಗುತ್ತದೆ. ನಂಜನಗೂಡಿನ ಶ್ರೀಕಂಠೇಶ್ವರನಿಗೆ ಇಂದಿಗೂ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಮಂಗಳಾರತಿ ನಡೆಯುತ್ತದೆ. ಶೃಂಗೇರಿಯಲ್ಲಿ ಸಾವಿರಾರು ಬ್ರಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದಲೇ ಹಣ ಹೋಗುತ್ತಿತ್ತು. ಮಲಗಿದವರನ್ನು ಎಬ್ಬಿಸಬಹುದು. ಆದರೆ ಸುಮ್ಮನೆ ಕಣ್ಣು ಮುಚ್ಚಿಕುಳಿತವರನ್ನು ಎಬ್ಬಿಸುವುದು ಕಷ್ಟ. ವಿಶ್ವನಾಥ್ ಅವರು ಇರುವ ಸತ್ಯವನ್ನು ಹೊರಗೆ ಹಾಕಿದ್ದಾರೆ. ಯಾವುದೇ ಭಯವಿಲ್ಲದೇ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಹುತಾತ್ಮರಾದವರನ್ನು ಏಕೆ ವಿರೋಧಿಸಬೇಕು ಎಂದು ಪ್ರಶ್ನಿಸಿರುವ ಇಬ್ರಾಹಿಂ, ಯಾವುದೋ ಕಾಯಿಲೆ ಬಂದು ಟಿಪ್ಪು ಸತ್ತಿದ್ದರೆ ಹುತಾತ್ಮರಾಗುತ್ತಿರಲಿಲ್ಲ. ಆದರೆ ಬ್ರಿಟಿಷರ ವಿರುದ್ಧದ ಹೋರಾಟದಿಂದ ಅವರು ವೀರ ಮರಣವನ್ನು ಅಪ್ಪಿದ್ದಾರೆ. ಟಿಪ್ಪು ವಿಚಾರದಲ್ಲಿ ಬಿಜೆಪಿ ಮತ್ತೆ ರಾಜಕೀಯ ಮಾಡುವುದು ಬೇಡ ಎಂದು ಕೇಸರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.