ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕಳ್ಳತನದ ಆರೋಪಿಯ ಕಾಲಿಗೆ ಶೂಟ್ ಮಾಡಲಾಗಿದೆ.
17 ಕಳ್ಳತನ ಕೇಸ್ನಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆ ಪೊಲೀಸರು ಗುಂಡೇಟು ನೀಡಿದ್ದಾರೆ.ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಬಳಿ ಆರೋಪಿ ವಿನೋದ್ ಕಾಲಿಗೆ ಗುಂಡೇಟು ನೀಡಲಾಗಿದೆ. ಕಳ್ಳತನ ಪ್ರಕರಣದಲ್ಲಿ ಭಾನುವಾರ ವಿನೋದ್ನನ್ನು ಪೊಲೀಸರು ಬಂಧಿಸಿದ್ದರು.
ತನ್ನ ಸಹಚರರನ್ನು ತೋರಿಸುತ್ತೇನೆಂದು ಕರೆದೊಯ್ದಿದ್ದ ವಿನೋದ್, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಬೆಂಡಿಗೇರಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಜಯಶ್ರೀ ಛಲವಾದಿ, ಕಾನ್ಸ್ ಟೇಬಲ್ ರಮೇಶ್ ಹಿತ್ತಲಮನಿ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದ. ಆತ್ಮರಕ್ಷಣೆಗಾಗಿ ವಿನೋದ್ ಕಾಲಿಗೆ ಪಿಐ ಜಯಶ್ರೀ ಗುಂಡು ಹಾರಿಸಿದ್ದಾರೆ. ಸದ್ಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








