ಅನೈತಿಕವಾಗಿ ಹುಟ್ಟಿದ ಅಂಗವೈಫಲ್ಯದ ಸರ್ಕಾರವಿದು : ಸಿದ್ದರಾಮಯ್ಯ
ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ
ಬೆಂಗಳೂರು : ನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಎಂದು ಹೇಳುತ್ತಿದ್ದವರು ಈಗ ಇವರ ಸರ್ಕಾರ ಏನಾಗಿದೆ, ಟೇಕಾಫ್ ಅಲ್ಲ ಸರ್ಕಾರ ಆಫ್ ಆಗಿಬಿಟ್ಟಿದೆ, ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ ಇದು ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರ ರಾಜ್ಯಪಾಲರ ಕೈಯಲ್ಲಿ ಸುಳ್ಳು ಹೇಳಿಸಿದೆ. ಕೆಲವು ಸದಸ್ಯರು ಆ ಸುಳ್ಳುಗಳನ್ನೇ ಬೆಂಬಲಿಸಿ ದೀರ್ಘವಾಗಿ ಭಾಷಣ ಮಾಡಿದ್ದಾರೆ. ಬಜೆಟ್ ನಲ್ಲಿ ಸತ್ಯವೇ ಇಲ್ಲ, ಎಲ್ಲವೂ ಸುಳ್ಳಿನ ಕಂತೆಯಷ್ಟೇ. ಅದು ದಿಕ್ಕು ದೆಸೆ, ಮುಂದಾಲೋಚನೆ, ಮುನ್ನೋಟವೂ ಇಲ್ಲದ ಭಾಷಣ. ಇನ್ನು ನಮ್ಮ ಸರ್ಕಾರದ ಸಾಧನೆಗಳನ್ನೇ ಯೋಜನೆಗಳನ್ನೇ ನಮ್ಮದೆಂದು ಬಜೆಟ್ ನಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ಚುನಾಯಿತ ಸರ್ಕಾರ ಮಾಡುವ ಕೆಲಸವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಿಗೆ ಒಂದು ಘಟನೆ, ಗೌರವ ಇರುತ್ತದೆ. ಈ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಅವರ ಬಾಯಿಯ ಮೂಲಕ ಸುಳ್ಳು ಹೇಳಿಸಿದೆ ಎಂದು ಪುನರುಚ್ಚರಿಸಿದರು.
ಇನ್ನು ಬಿಜೆಪಿಯವರದ್ದು ಚುನಾಯಿತ ಸರ್ಕಾರವಲ್ಲ, ಜನರಿಂದ ಆರಿಸಿ ಬಂದ ಸರ್ಕಾರವೂ ಅಲ್ಲ, ಪಾಪದ ಹಣ ಖರ್ಚು ಮಾಡಿ ಕಾಂಗ್ರೆಸ್, ಜೆಡಿಎಸ್ ನಿಂದ ಶಾಸಕರನ್ನು ಕರೆಸಿಕೊಂಡು ಸರ್ಕಾರ ರಚಿಸಿದ್ದಾರೆ. ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ. ಅನೈತಿಕವಾಗಿ ಹುಟ್ಟಿದ ಅಂಗವೈಫಲ್ಯದ ಸರ್ಕಾರವಿದು ಎಂದು ಗುಡುಗಿದ ಸಿದ್ದರಾಮಯ್ಯ, ನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಎಂದು ಹೇಳುತ್ತಿದ್ದವರು ಈಗ ಇವರ ಸರ್ಕಾರ ಏನಾಗಿದೆ, ಟೇಕಾಫ್ ಅಲ್ಲ ಸರ್ಕಾರ ಆಫ್ ಆಗಿಬಿಟ್ಟಿದೆ, ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ, 18 ತಿಂಗಳಾದರೂ ಯಡಿಯೂರಪ್ಪಗೆ ಸರ್ಕಾರ ಎಂಬ ಬಸ್ ಓಡಿಸಲು ಬರುತ್ತಿಲ್ಲ, ಗೇರ್ ಹಾಕಲು ಕೂಡ ಯಡಿಯೂರಪ್ಪಗೆ ತಿಳಿಯುತ್ತಿಲ್ಲ. ನಾಲ್ಕು ಕಡೆಗಳಿಂದಲೂ ಬಸ್ ಹಿಡಿದು ಎಳೆದಾಡುತ್ತಿದ್ದಾರೆ, ಹೀಗೇ ಎಳೆದರೆ ಗೇರೇ ಕಿತ್ತುಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಕಿಚಾಯಿಸಿದ ಸಿದ್ದರಾಮಯ್ಯ, ಒಂದೂವರೆ ವರ್ಷವಾದರೂ ಸರ್ಕಾರ ಹಳಿಗೆ ಬಂದಿಲ್ಲ. ಐದು ದಿನದಲ್ಲಿ ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಲಾಯಿತು. ರಾಜ್ಯದ ಇತಿಹಾಸದಲ್ಲೇ ಈ ರೀತಿ ನಡೆದಿರಲಿಲ್ಲ. ಇದು ಸಮರ್ಥ ಮುಖ್ಯಮಂತ್ರಿ ಮಾಡುವ ಕೆಲಸವೇ ಎಂದರು.
ಕೃಷಿ ಕಾನೂನು, ರೈತ ಪ್ರತಿಭಟನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕೊರೊನಾ ಸಂದರ್ಭದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಸುಗ್ರೀವಾಜ್ಞೆ ಹೊರಡಿಸುವ ತುರ್ತು ಏನಿತ್ತು. ಈ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಬೀದಿಗೆ ತರಲಾಗಿದೆ. ಪರಿಸ್ಥಿತಿ ಜ್ವಾಲಾ ಮುಖಿಯಂತಾಗಿದೆ. ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಸ್ಫೋಟಗೊಂಡರೆ ಸರ್ಕಾರ ಕೊಚ್ಚಿ ಹೋಗಲಿದೆ. ರೈತರನ್ನು ಎದುರು ಹಾಕಿಕೊಂಡವರು ಯಾರು ಕೂಡ ಉಳಿದಿಲ್ಲ, ಕಠೋರ ಕಾನೂನು ಜಾರಿಗೆ ತಂದು ರೈತರ ಆಕ್ರೋಶಕ್ಕೆ ಸರ್ಕಾರ ತುತ್ತಾಗಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.









