ಬೆಂಗಳೂರು, ಜೂನ್ 8: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಅಳಿಯನ ಅಗಲಿಕೆ, ಪ್ರೀತಿಯ ಮಗಳ ದುಃಖದಿಂದ ಕುಸಿದಿರುವ ಹಿರಿಯ ನಟ ಸುಂದರ್ ರಾಜ್ ಅವರಿಗೆ ಸಾಂತ್ವನ ಹೇಳಿದ್ದಾರೆ.

ಟಿ.ಎನ್.ಸೀತಾರಾಮ್ ತಮ್ಮ ಫೇಸ್‍ಬುಕ್‍ನಲ್ಲಿ ಚಿರಂಜೀವಿ ಸರ್ಜಾ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದು ‘ಪ್ರೀತಿಯ ಸುಂದರ ರಾಜ,
ಈ ಕ್ಷಣದಲ್ಲಿ ಎಲ್ಲ ಬಗೆಯ ಸಾಂತ್ವನದ ಮಾತುಗಳೂ ಕೂಡ ಯಾಂತ್ರಿಕ ವೆನ್ನಿಸುತ್ತದೆ..
ಆದರೆ ನಿನ್ನಂಥ ಮೃದು ಮನಸ್ಸಿನ ಮನುಷ್ಯ ನಿಗೆ ಇದು ವಿಧಿ ಕೊಡುತ್ತಿರುವ ದೊಡ್ಡ ಹೊಡೆತ.
ಒಬ್ಬಳೇ ಪ್ರೀತಿಯ ಮಗಳ ಪತಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಠಾತ್ ನಿಧನರಾಗಿರುವುದು ನಿಮ್ಮ ಮನೆಯ ಎಲ್ಲರಿಗೂ ಚೇತರಿಸಿಕೊಳ್ಳಲು ಆಗದಂಥ ಆಘಾತ.
ಅದರಲ್ಲೂ ಚಿರಂಜೀವಿ ಸದಾ ಜೀವ ಚೈತನ್ಯ ವನ್ನು ತುಂಬಿಕೊಂಡಿರುತ್ತಿದ್ದಂಥ ಹುಡುಗ.ಅವನ ಸಾವು
ಮೇಘನಾ ಳ ಈಗಿನ ಸ್ಥಿತಿಯಲ್ಲಿ
ಅಪಾರ ನೋವು ಮತ್ತು ಶಮನವಾಗದ ಸಂಕಟ ತಂದಿರುತ್ತದೆ.
ಮಾತುಗಳು ದುಃಖವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.
ಬದುಕಿನ ಬಗ್ಗೆ ಆಳವಾದ ಅರಿವನ್ನು ಪಡೆದಿರುವ ನಿನಗೆ ಹೆಚ್ಚು ಹೇಳಲಾರೆ.
ಪ್ರಮೀಳಾ, ಮತ್ತು ಮೇಘನಾ ಗೆ ನೀನು ಮಾತ್ರ ಧೈರ್ಯ ನೀಡಬಲ್ಲೆ.
ಕಣ್ಣೀರನ್ನು ನಗುವಿನೊಂದಿಗೆ ಬೆರೆಸಬಲ್ಲ ನಿನ್ನ ಎಂದಿನ ಶಕ್ತಿ ನಿನ್ನೊಂದಿಗಿರಲಿ.
ಚಿರು ಮನೆಯವರಿಗೂ ನೋವು ಸಹಿಸುವ ಶಕ್ತಿ ಬರಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡು ಸುಂದರ್ ರಾಜ್ ಅವರಿಗೆ ಧೈರ್ಯ ಹೇಳಿದ್ದಾರೆ.






