ಟೋಕಿಯೋ ಒಲಿಂಪಿಕ್ಸ್ : ಸೆಮೀಸ್ ನಲ್ಲಿ ಸಿಂಧು.. ನಿಜವಾದ ಸವಾಲು
ಟೋಕಿಯೋ : ಒಲಿಂಪಿಕ್ಸ್ ನಲ್ಲಿ ಪಿ.ವಿ.ಸಿಂಧು ಆಟ ಪದಕದ ಹಾದಿ ಹಿಡಿದಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಸ್ಟಾರ್ ಶಟ್ಲರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇಲ್ಲಿ ಗೆದ್ದರೇ ಚಿನ್ನ ಅಥವಾ ಬೆಳ್ಳಿ ಖಚಿತವಾಗುತ್ತದೆ. ಸೋತರೆ, ಕಂಚಿಗೆ ಹೋರಾಡಬೇಕಾಗುತ್ತದೆ. ಸಿಂಧು ಇರುವ ಫಾರ್ಮ್ ನೋಡಿದ್ರೆ ಈ ಬಾರಿ ಪದಕದ ಬಣ್ಣ ಬದಲಾಗೋದು ಖಚಿತ ಎನಿಸುತ್ತಿದೆ.
ವಿಶ್ವ ಚಾಂಪಿಯನ್, ರಿಯೊ ಒಲಿಂಪಿಕ್ಸ್ ರನ್ನರ್ ಅಪ್ ಪಿ.ವಿ ಸಿಂಧು ಟೋಕಿಯೋದಲ್ಲಿ ಅಬ್ಬರಿಸುತ್ತಿದ್ದಾರೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‍ಫೈನಲ್‍ನಲ್ಲಿ, ಆರನೇ ಶ್ರೇಯಾಂಕದ ಸಿಂಧು ನಾಲ್ಕನೇ ಶ್ರೇಯಾಂಕದ ಅಕಾನೆ ಯಮಗುಚಿ ಅವರನ್ನು 21-13, 22-20 ರಲ್ಲಿ 56 ನಿಮಿಷಗಳಲ್ಲಿ ಮಣಿಸಿದ್ದಾರೆ.
ಅಸಲಿ ಆಟ ಇಂದು
ಭಾರತದ ಸ್ಟಾರ್ ಪಿ ವಿ ಸಿಂಧು ಇಂದು ನಿಜವಾದ ಹೋರಾಟವನ್ನು ಎದುರಿಸಲಿದ್ದಾರೆ. ವಿಶ್ವದ ನಂಬರ್ ಒನ್ ತೈ ಜು ಯಿಂಗ್ (ಚೈನೀಸ್ ತೈಪೆ) ಗೆ ಸಿಂಧು ಇಂದು ಸವಾಲ್ ಹಾಕಲಿದ್ದಾರೆ. ಒಂದು ರೀತಿಯಲ್ಲಿ ತೈ ಜುಯಿಂಗ್ ನಮ್ಮ ಸಿಂಧುಗೆ ಕಬ್ಬಣದ ಕಡಲೆಯೇ ಆಗಿದ್ದಾರೆ. ಸಾಕಷ್ಟು ಪಂದ್ಯಗಳಲ್ಲಿ ಸಿಂಧುಗೆ ತೈ ಸೋಲುಣಿಸಿದ್ದಾರೆ. ಅಲ್ಲದೆ ಇದು ಸೆಮೀಸ್ ಆಗಿರುವುದರಿಂದ ಪಿ ವಿ ಸಿಂಧು ಮೇಲೆ ತುಸು ಹೆಚ್ಚಿನ ಒತ್ತಡವೇ ಇದೆ. ಈ ಹಿನ್ನೆಲೆಯಲ್ಲಿ ಸಿಂಧು ತನ್ನ ಆಯುಧಗಳನ್ನು
ಸಾಣೆ ಹಿಡಿಯುವುದರ ಜೊತೆಗೆ ಎದುರಾಳಿಯ ನ್ಯೂನತೆಗಳ ಮೇಲೆ ಕಣ್ಣಿಟ್ಟು ಹೋರಾಡಬೇಕಾಗುತ್ತದೆ.