ಎರಡು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯ ಕಬೀರ್ ನಗರದಲ್ಲಿ ನಡೆದಿದೆ.
ಅಲ್ಲದೇ, ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರನ್ನು ಅರ್ಷದ್(30), ಮತ್ತು ತೌಹಿದ್(20) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ರೆಹಾನ್ (22) ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿಯುತ್ತಿದ್ದಂತೆ ಅವಶಷಗಳಡಿ ಮೂವರು ಕಾರ್ಮಿಕರು ಸಿಕ್ಕಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ವ್ಯಕ್ತಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂದು ಹೇಳಿದ್ದಾರೆ. ಕಟ್ಟಡದ ಮಾಲೀಕನನ್ನು ಶಾಹಿದ್ ಎನ್ನಲಾಗಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.