ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಈಗಾಗಲೇ ದರ್ಶನ್ ಅರೆಸ್ಟ್ ಆಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದಲೂ ದರ್ಶನ್ ವಿರುದ್ಧ ಗದಾ ಪ್ರಹಾರ ನಡೆಸುತ್ತಿರುವ ನಿರ್ಮಾಪಕ ಉಮಾಪತಿ ಮತ್ತೊಮ್ಮೆ ವ್ಯಂಗ್ಯವಾಡಿದ್ದಾರೆ.
ತಾವು ಕಂಡಂತೆ ದರ್ಶನ್ ಹೇಗೆ? ಎಂಬುವುದನ್ನು ಸದ್ಯ ನಿರ್ಮಾಪಕ ಉಮಾಪತಿ ಹೇಳಿದ್ದಾರೆ. ಈಗ ದರ್ಶನ್ ಬ್ಯಾಡ್ ಮ್ಯಾನ್. ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಆಗಬಾರದು ಎಂದು ದರ್ಶನ್ಗೆ (Darshan) ಕುಟುಕಿದ್ದಾರೆ. ನಾನು ಅವರು ಸ್ನೇಹಿತರಾಗಿರುವರೆಗೂ ದರ್ಶನ್ ಒಳ್ಳೆಯ ವ್ಯಕ್ತಿನೇ. 6 ಗಂಟೆ ನಂತರ ಬ್ಯಾಡ್ ಮ್ಯಾನ್, 6ರ ಮುಂಚೆ ಗುಡ್ ಮ್ಯಾನ್. ಅವರವರ ಹವ್ಯಾಸ, ಚಟ ಅವರನ್ನು ಹಾಳು ಮಾಡುತ್ತೆ. ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಅವತ್ತೂ ಈ ಪ್ರಕರಣದ ಕುರಿತು ನಾನು ಮಾತನಾಡಿದಾಗ ಮನೆಯಲ್ಲಿ ಅವರದ್ದು ಏನೋ ಕೆಟ್ಟ ಸಮಯ. ಆ ತರಹ ನೀನು ಮಾತನಾಡಬಾರದು ಎಂದು ನನ್ನ ತಾಯಿ ಮತ್ತು ಪತ್ನಿ ನನಗೆ ತಿದ್ದಿದರು. ಹಾಗೆ ನಾವು ಕುಟುಂಬವನ್ನು ಇಟ್ಟುಕೊಂಡಿದ್ದೇವೆ. ಎಷ್ಟೇ ಬೆಳೆದರೂ ಕೂಡ ಮನುಷ್ಯ ತಗ್ಗಿ ಬಗ್ಗಿ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ನಾನು ನೋಡಿದ ಹಾಗೆ ದರ್ಶನ್ ಒಳ್ಳೆಯ ಮನುಷ್ಯನೇ. ನನಗಂತೂ ಅವರು ಅನ್ಯಾಯ ಮಾಡಿಲ್ಲ. ಆದರೆ ಆ ಮೈಸೂರು ಕೇಸ್ ನಂತರ ಅವರ ನಡವಳಿಕೆ ಬದಲಾಯಿತು. ಅವರ ಸಹವಾಸ ಕೂಡ ಬದಲಾಯಿತು ಎಂದು ಆರೋಪಿಸಿದ್ದಾರೆ. ಕಾಟೇರ ಟೈಟಲ್ ಅವರೇ ಕೊಟ್ಟಿರಬಹುದು. ಇದು ನನ್ನ ಬ್ಯಾನರ್ನಲ್ಲಿ ರಿಜಿಸ್ಟರ್ ಆಗಿದೆ. ಅದಕ್ಕೆ ದುಡ್ಡು ಹಾಕಿದವನು ನಾನು. ಸಿನಿಮಾದಿಂದ ನಾನು ದುಡ್ಡು ಮಾಡಿದ್ದಲ್ಲ. ಸಿನಿಮಾ ಮಾಡುವ ದುಡ್ಡಿನಲ್ಲಿ ನಾನು ವ್ಯಾಪಾರ ಮಾಡಿದರೆ ಡಬಲ್ ದುಡಿಯುತ್ತೇನೆ. ಇವತ್ತು ಇಷ್ಟು ಗೌರವ, ಸ್ಥಾನಮಾನ ಸಿಕ್ಕಿದೆ ಅಂದರೆ ಅದು ಸಿನಿಮಾದಿಂದ ಎಂದು ಉಮಾಪತಿ ಹೇಳಿದ್ದಾರೆ.