ಏಳು ವರ್ಷಗಳ ಹಿಂದೆ ನಿರ್ಭಯಾಳನ್ನು ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ, ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಿದ ಮರುದಿನವೇ ವಿಶ್ವಸಂಸ್ಥೆ ಮರಣದಂಡನೆ ಶಿಕ್ಷೆ ಮೇಲೆ ನಿಷೇಧ ಹೇರುವಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.
2012ರಲ್ಲಿ ದೆಹಲಿಯ ಪ್ಯಾರಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಬಸ್ ನಲ್ಲಿ ಗ್ಯಾಂಗ್ ರೇಪ್ ಮಾಡಿ ನಂತರ ಆಕೆಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಏಳು ವರ್ಷಗಳ ನಂತರ, ನಾಲ್ವರು ಅಪರಾಧಿಗಳಾದ ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಹಾಗೂ ಅಕ್ಷಯ್ ಕುಮಾರ್ ಸಿಂಗ್‌ರನ್ನು ಶುಕ್ರವಾರ ಬೆಳಗ್ಗೆ ನೇಣಿಗೇರಿಸಲಾಗಿತ್ತು.
ಭಾರತದಲ್ಲಿ ಶುಕ್ರವಾರ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡ್ಯುಜರಿಕ್, ಜಗತ್ತಿನಾದ್ಯಂತ ಮರಣದಂಡನೆ ಶಿಕ್ಷೆಯ ಮೇಲೆ ನಿಷೇಧ ಹೇರಬೇಕು ಎಂದು ವಿಶ್ವಸಂಸ್ಥೆ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ ಎಂದಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಮರಣದಂಡನೆಯ ಶಿಕ್ಷೆಯನ್ನು ನಿಲ್ಲಿಸುವಂತೆ ನಾವು ಎಲ್ಲಾ ದೇಶಗಳಿಗೆ ಕರೆ ನೀಡುತ್ತೇವೆ ಅಥವಾ ಇದಕ್ಕೆ ಕನಿಷ್ಠ ನಿಷೇಧ ಹೇರಬೇಕಿದೆ ಎಂದು ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.
ಡಿಸೆಂಬರ್ 16, 2012 ರಂದು ದೆಹಲಿಯಲ್ಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯನ್ನು ಚಲಿಸುವ ಬಸ್ಸಲ್ಲಿ, ಸಾಮೂಹಿಕ ಅತ್ಯಾಚಾರ ಮಾಡಿ ನಂತರ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದು, ಅತ್ಯಾಚಾರ ಕಾನೂನುಗಳಲ್ಲಿ ಬದಲಾವಣೆಗಳಾದವು.
ಇದೇ ಮೊದಲ ಬಾರಿಗೆ 16 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ಹೊಂದಿರುವ ದಕ್ಷಿಣ ಏಷ್ಯಾದ ಅತಿದೊಡ್ಡ ಜೈಲು ತಿಹಾರ್ ಜೈಲಿನಲ್ಲಿ ನಾಲ್ಕು ಜನ ಅಪರಾಧಿಗಳನ್ನು ಶುಕ್ರವಾರ ಗಲ್ಲಿಗೇರಿಸಲಾಗಿತ್ತು. ನಾಲ್ವರು ನಿರ್ಭಯಾ ಹಂತಕರು ಗಲ್ಲಿಗೇರುವ ಕೊನೆ ಕ್ಷಣದವರೆಗೂ ತಮ್ಮ ಶಿಕ್ಷೆಯನ್ನು ಮುಂದೂಡಲು ಸಾಧ್ಯವಿರುವ ಎಲ್ಲ ರೀತಿಯ ಕಾನೂನು ಹೋರಾಟ ನಡೆಸಿದ್ದರು. ಕೊನೆಗೆ ಗುರುವಾರ ರಾತ್ರಿ ಈ ಎಲ್ಲಾ ಪ್ರಯತ್ನಗಳು ವಿಫಲವಾಗಿ ಶುಕ್ರವಾರ ಬೆಳಗ್ಗೆ 5.30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು.