ಗರ್ಭಿಣಿ ಮೇಲೆ ಹರಿದ ಟ್ರಕ್ – ಜೀವಂತವಾಗಿ ಹೊರ ಬಂದ ಮಗು
ಗರ್ಭಿಣಿ ಮಹಿಳೆ ಮೇಲೆ ಟ್ರಕ್ ಹರಿದು ದೇಹ ಚಿದ್ರವಾದರೂ ಗರ್ಭದಿಂದ ಮಗು ಜೀವಂತವಾಗಿ ಹೊರಬಂದಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ.
266 ವರ್ಷದ ಮಹಿಳೆ ಆಗ್ರಾ ನಿವಾಸಿ ಕಾಮಿನಿ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಹೆತ್ತವರ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ತುಂಡ್ಲಾ ಬಳಿ ಈ ಘಟನೆ ನಡೆದಿದೆ. ಬೈಕ್ ಚಲಾಯಿಸುತ್ತಿದ್ದ ಪತಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ನಂತರ ತಂದೆ ಬಾಲಕಿಯನ್ನು ಎದೆಗೆ ಹಿಡಿದುಕೊಂಡು ಅತ್ತಿದ್ದಾರೆ. ಸದ್ಯ ಬಾಲಕಿಯನ್ನು ಫಿರೋಜಾಬಾದ್‌ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಆಂತರಿಕ ಗಾಯಗಳಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಮಧ್ಯೆ ಮಹಿಳೆಯ ಸಾವಿನ ಸುದ್ದಿ ಕೇಳಿ, ಆಕೆಯ ಚಿಕ್ಕಪ್ಪ ಆಘಾತದಿಂದ ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ ಮಹಿಳೆ ಮತ್ತು ಆಕೆಯ ಚಿಕ್ಕಪ್ಪನ ಅಂತ್ಯಕ್ರಿಯೆ ಮಾಡಲಾಗಿದೆ.
ಆಗ್ರಾ ಜಿಲ್ಲೆಯ ಧನೌಲಾ ನಿವಾಸಿ ರಾಮು ಬುಧವಾರ ಪತ್ನಿ ಕಾಮಿನಿಯೊಂದಿಗೆ ಬೈಕ್‌ನಲ್ಲಿ ಅತ್ತೆಯ ಮನೆಗೆ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಯತ್ನಿಸಿದಾಗ ಪತಿ ರಾಮು ಬೈಕ್‌ನ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಾಮಿನಿ ಕೆಳಗೆ ಬಿದ್ದಿದ್ದು, ವೇಗವಾಗಿ ಬಂದ ಟ್ರಕ್ ಆಕೆಯ ಮೇಲೆ ಹರಿದಿದೆ. ಕಾಮಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಹೊಟ್ಟೆಯಿಂದ ಮಗು ಹೊರಬಂದಿದೆ ಎಂದು ಸ್ಥಳಿಯರು ಹೇಳಿದ್ದಾರೆ.
ಟ್ರಕ್ ಚಾಲಕ ಪರಾರಿಯಾಗಿದ್ದಾನೆ, ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ, ಪತಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ನಾರ್ಖಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಫತೇ ಬಹದ್ದೂರ್ ಸಿಂಗ್ ಬಧೋರಿಯಾ ಹೇಳಿದ್ದಾರೆ.








