ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಮೂಲಭೂತ ಹಕ್ಕಲ್ಲ – ಅಲಹಾಬಾದ್ ಹೈಕೋರ್ಟ್
ದೇಶಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ವಿವಾದಗಳುಂಟಾಗುತ್ತಿರುವ ಹೊತ್ತಿನಲ್ಲಿ, ಮಸೀದಿಗಳಲ್ಲಿ ಧ್ವನಿವರ್ಧಕಗಳ ಅಳವಡಿಕೆ ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಅಳವಡಿಕೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿವೇಕ್ ಕುಮಾರ್ ಬಿರ್ಲಾ ಮತ್ತು ವಿಕಾಸ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವುದು ಸಾಂವಿಧಾನಿಕ ಹಕ್ಕು ಅಲ್ಲ ಎಂದು ಕಾನೂನು ಹೇಳುತ್ತದೆ ಎಂದಿದ್ದಾರೆ.
ಡಿಸೆಂಬರ್ 3, 2021 ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ, ಇರ್ಫಾನ್ ಎಂಬ ವ್ಯಕ್ತಿ ಧೋರನ್ ಪುರ ಗ್ರಾಮದ ಮಸೀದಿಯಲ್ಲಿ ಧ್ವನಿವರ್ಧಕ ಸ್ಥಾಪಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಮೇ 2020 ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಮಸೀದಿಯಿಂದ ಆಜಾನ್ ಪಠಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯವಾಗಿದೆ, ಆದರೇ ಧ್ವನಿವರ್ಧಕಗಳಂತಹ ಸೌಂಡ್ ಆಂಪ್ಲಿಫೈಯರ್ಗಳ ಬಳಕೆಯು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ನ ಹಿಂದಿನ ಆದೇಶದ ಅನುಸರಣೆಯಲ್ಲಿ, ಯುಪಿ ಸರ್ಕಾರವು ಧಾರ್ಮಿಕ ಸ್ಥಳಗಳಿಂದ 67,128 ಧ್ವನಿವರ್ಧಕಗಳನ್ನು ತೆಗೆದುಹಾಕಿದೆ. ಶುಕ್ರವಾರದವರೆಗೆ ರಾಜ್ಯದಾದ್ಯಂತ 57,352 ಆಂಪ್ಲಿಫೈಯರ್ಗಳ ಪರಿಮಾಣವನ್ನು ಕಡಿಮೆ ಮಾಡಿದೆ.