ರಾಮಮಂದಿರ ಭೂಮಿ ಪೂಜೆಗೆ ದಿನಾಂಕ ನಿಗದಿ ಮಾಡಿದ ವಿಜಯೇಂದ್ರ ಶರ್ಮಾ ಅವರಿಗೆ ಬೆದರಿಕೆ ಕರೆ
ಬೆಳಗಾವಿ, ಅಗಸ್ಟ್ 4: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರದ ಭೂಮಿ ಪೂಜೆಗೆ ಆಗಸ್ಟ್ 5 ರಂದು ದಿನಾಂಕ ನಿಗದಿಪಡಿಸಿದ ಪಂಡಿತ್ ಎನ್.ಆರ್ ವಿಜಯೇಂದ್ರ ಶರ್ಮಾ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಅವರ ಭದ್ರತೆಗಾಗಿ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಕರ್ನಾಟಕದ ಬೆಳಗಾವಿ ನಿವಾಸಿ ಪಂಡಿತ್ ಶರ್ಮಾ ಅವರು ದೂರವಾಣಿ ಕರೆಗಳ ಮೂಲಕ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದು, ಭೂಮಿ ಪೂಜಾ ದಿನಾಂಕವನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ.
ಆಗಸ್ಟ್ 5 ರಂದು ಭೂಮಿ ಪೂಜೆಯ ದಿನಾಂಕ ಎಂದು ಏಕೆ ನಿಗದಿಪಡಿಸಿದ್ದು ಮತ್ತು ಸಮಾರಂಭದಲ್ಲಿ ಏಕೆ ಭಾಗವಹಿಸಲು ಬಯಸುತ್ತಿದ್ದೀರಿ ಎಂದು ಕರೆ ಮಾಡಿದವರು ಕೇಳಿದ್ದಾರೆ ಎಂದು ಅವರು ಹೇಳಿದರು. ಸಮಾರಂಭದ ಸಂಘಟಕರು ತಮ್ಮನ್ನು ಸಂಪರ್ಕಿಸಿದಾಗ ಗುರುವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎಂದು ತಾವು ಹೇಳಿರುವುದಾಗಿ ತಿಳಿಸಿದ ಅವರು ಕರೆ ಮಾಡಿದವರು ತಮ್ಮ ಹೆಸರನ್ನು ಹೇಳಲಿಲ್ಲ ಎಂದು ತಿಳಿಸಿದರು.
ಬೆಳಗಾವಿಯ ತಿಲಕ್ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆಯಾದರೂ, ಪಂಡಿತ್ ಶರ್ಮಾ ಅವರು ಈ ಫೋನ್ ಕರೆಗಳ ಮೂಲಕ ಬೆದರಿಕೆ ಒಡ್ಡುತ್ತಿರುವುದನ್ನು ತಾನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ ಸಂಘಟಕರು ಪಂಡಿತ್ ಶರ್ಮಾ ಅವರನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಲು ಕೇಳಿಕೊಂಡಿದ್ದರು. ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ಶರ್ಮಾ ಆರಂಭದಲ್ಲಿ ಅಕ್ಷಯ ತೃತೀಯ ದಿನಾಂಕವನ್ನು ಏಪ್ರಿಲ್‌ನಲ್ಲಿ ಆರಿಸಿಕೊಂಡರು ಆದರೆ ನಂತರ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಆಗಿದ್ದರಿಂದ ಅದು ಮುಂದೂಡಿಕೆ ಮಾಡಲಾಯಿತು.