ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನ ಕುಸ್ತಿ ಸ್ಪರ್ಧೆಯ 50 ಕೆಜಿ ವಿಭಾಗದಲ್ಲಿ ಪದಕ ಗೆಲ್ಲುವ ಸನಿಹದಲ್ಲಿದ್ದ ವಿನೇಶ್ ಫೋಗಟ್ ಹೆಚ್ಚುವರಿ ತೂಕದಿಂದಾಗಿ ಅನರ್ಹಗೊಂಡು ನಿರಾಸೆ ಮೂಡಿಸಿದ್ದಾರೆ. ಆದರೆ, ಫೈನಲ್ ಪಂದ್ಯ ಆಡುವುದಕ್ಕಾಗಿ ತೂಕ ಕಡಿತಗೊಳಿಸಲು ಇಡೀ ದಿನ ಸಾಕಷ್ಟು ಕಸರತ್ತು, ಕಠಿಣ ವ್ಯಾಯಾಮ ಮತ್ತು ಆಹಾರ ಪದ್ಧತಿ ಅನುಸರಿಸಿ, ರಕ್ತವನ್ನು ಚೆಲ್ಲಿದರೂ ಅವರ ಪ್ರಯತ್ನ ಯಶ ಕಾಣಲಿಲ್ಲ. ಹೀಗಾಗಿ ಇಡೀ ಭಾರತ ಮಮ್ಮಲ ಮರಗುತ್ತಿದ್ದು, ವಿನೇಶ್ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳುತ್ತಿದೆ.
ಪ್ರತಿ ಪಂದ್ಯದಲ್ಲಿ ಕುಸ್ತಿಪಟುಗಳ ತೂಕ ಮಾಡುವುದು ಕಡ್ಡಾಯ ನಿಯಮ. ಆದರೆ, ಆ. 6ರಂದು ಕುಸ್ತಿಪಟು 50 ಕೆಜಿ ಯೊಳಗಿದ್ದರು. ನಿನ್ನೆವರೆಗೂ ಎಲ್ಲವೂ ನಿಯಮಗಳ ಪ್ರಕಾರ ನಡೆದಿದೆ. ನಿನ್ನೆಯ ಪಂದ್ಯ ಅಂತ್ಯವಾದಾಗ ಅವರು 52 ಕೆಜಿ ಇದ್ದರು. ಹೀಗಾಗಿ ಅವರು ಎಲ್ಲ ರೀತಿಯಿಂದಲೂ ಡಯೆಟ್ ಮಾಡುತ್ತಾರೆ. ಕೆಲವೊಮ್ಮೆ ಬರೀ ನೀರು ಕುಡಿಯುತ್ತಾರೆ. ತೂಕ ಹೆಚ್ಚಾದ ಹಿನ್ನೆಲೆ ಈ ಅವಧಿಯಲ್ಲಿ ತೂಕ ಇಳಿಸಲು ವಿನೇಶ್ ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ರಾತ್ರಿಯೆಲ್ಲಾ ತೂಕ ಇಳಿಸಲು ಪ್ರಯತ್ನ ಮಾಡಿದ್ದಾರೆ. ತೂಕ ಇಳಿಸಿದ ಮೇಲೂ 150 ಗ್ರಾಂ ಅಧಿಕವಾಯ್ತು. 30 ನಿಮಿಷ ತೂಕ ಇಳಿಸಲು ಅವಕಾಶ ನೀಡಿದ್ದರು. ಬಳಿಕ 15 ನಿಮಿಷ ಸಮಯ ನೀಡಲಾಗಿತ್ತು.
ತಲೆಗೂದಲು ಕಟ್ ಮಾಡುವ ಮೂಲಕ ಕುಸ್ತಿಪಟು ವಿನೇಶ್ ಫೋಗಟ್ ಎಲ್ಲ ರೀತಿಯ ಪ್ರಯತ್ನ ಮಾಡಿದರು. ಬಳಿಕವೂ 100-150 ತೂಕ ಹೆಚ್ಚಿತ್ತು. ವೈದ್ಯರು ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯವಿಲ್ಲ. ಏನಾದರೂ ಮಾಡಿದರೆ ಜೀವಕ್ಕೆ ಅಪಾಯ ಎಂದು ಹೇಳಿದ್ದರು. ರಾತ್ರಿಯಿಡೀ ವಿನೇಶ್ 2 ಕೆಜಿ ಅಧಿಕ ತೂಕ ಹೊಂದಿದ್ದರು. ಹೆಚ್ಚುವರಿ ತೂಕವನ್ನು ಕಡಿತಗೊಳಿಸಲು ರಾತ್ರಿಯಿಡೀ ಕೆಲಸ ಮಾಡಿದ್ದಾರೆ. ವಿನೇಶ್ ಅವರು 12 ಗಂಟೆಗಳಿಗೂ ಹೆಚ್ಚು ಕಾಲ ಏನನ್ನೂ ತಿನ್ನಲಿಲ್ಲ. ಏನನ್ನೂ ಕುಡಿಯಲಿಲ್ಲ ಮತ್ತು ಕಠಿಣ ದಿನಚರಿಯಲ್ಲಿ ಭಾಗವಹಿಸಿದರು. ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಿ ಶ್ರಮಿಸಿದ್ದರು.
ಫೈನಲ್‌ನಿಂದ ಅನರ್ಹ ಆದ ಹಿನ್ನೆಲೆ ಬೆಳ್ಳಿ ಪದಕವೂ ಸಿಗುವುದಿಲ್ಲ. ನಿಯಮಗಳ ಪ್ರಕಾರ ಎಲ್ಲವೂ ನಡೆದಿದೆ. ಈ ಹಂತದಲ್ಲಿ ಯಾವುದೇ ಒತ್ತಡ ಹೇರಿದರೂ ಸಾಧ್ಯವಿಲ್ಲ. ಹಾಕಿ ಸೇರಿದಂತೆ ಬೇರೆ ಪಂದ್ಯಗಳಲ್ಲಿ ಅಂಪೈರ್‌ಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಬಹುದು. ತೂಕದ ವಿಚಾರವಾಗಿರುವ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯವಿಲ್ಲ. 53 ಕೆಜಿ ಸ್ಪರ್ಧೆ ಮಾಡುತ್ತಿದ್ದ ವಿನೇಶ್ ಬಳಿಕ 50 ಕೆಜಿಗೆ ಸ್ಪರ್ಧಿಸಿದ್ದರು. ಆದರೆ, ಅವರ ಕನಸು ನುಚ್ಚುನೂರಾಗಿದೆ.