ಬೆಂಗಳೂರು : ಡ್ರಗ್ ಮಾಫಿಯಾ ಹಣದಿಂದ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಸಚಿವ ಸಿ.ಟಿ ರವಿ, ಈ ರೀತಿ ಹೇಳಿದ್ದಾರೆಂದರೆ ಕುಮಾರಸ್ವಾಮಿಯವರನ್ನು ಒಮ್ಮೆ ಪರೀಕ್ಷೆಗೆ ಒಳಪಡಿಸಬೇಕು. ಸರಿಯಾಗಿದ್ದಾಗ ಹೇಳಿದ್ದಾರೊ ಅಥವಾ ಮತ್ತಲ್ಲಿ ಹೇಳಿದ್ದಾರೋ ಅವರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಯಾಕೆ ಬಿತ್ತು ಅನ್ನೋದು ಎಲ್ಲಾರಿಗೂ ಗೊತ್ತಿದೆ. ಸ್ವತಃ ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷದ ಅಧ್ಯಕ್ಷರೇ ಪಾರ್ಟಿ ಬಿಟ್ಟು ಬಂದರು. ರೋಷನ್ ಬೇಗ್ ರಾಜೀನಾಮೆ ನೀಡಿದ್ರು. ಅದಕ್ಕೆಲ್ಲಾ ಕಾರಣ ನೀಡಿದ್ದಾರೆ. ಸರ್ಕಾರ ಏಕಾಏಕಿ ಬಿದ್ದಿಲ್ಲ. ಅದಕ್ಕೆ ಒಂದು ವರ್ಷದ ಆಂತರಿಕ ಕಿತ್ತಾಟ. ಸರ್ಕಾರ ನಂಬರ್ ಮೇಲೆ ಬಂದಿದೆ ಎಂದರು.
ಮುಂದುವರಿದು ಹೆಚ್ ಡಿಕೆ ವಿರುದ್ಧ ಕಿಡಿಕಾರಿದ ಸಚಿವರು, ಡ್ರಗ್ಸ್ ಆರೋಪ ಮಾಡ್ತಿದ್ದೀರಲ್ಲ. ನೀವು ಅಂದು ಮುಖ್ಯಮಂತ್ರಿ ಆಗಿದ್ದವರು. ನಿಮ್ಮ ಬಳಿ ಅಧಿಕಾರ ಇತ್ತು, ಇಂಟೆಲಿಜೆನ್ಸಿ ಇತ್ತು. ಹಾಗಾದರೆ ನೀವು ಅಷ್ಟು ದುರ್ಬಲ ಆಗಿದ್ರೆ ಅಥವಾ ನಿಮಗೆ ಡ್ರಗ್ ಮಾಫಿಯಾದವರ ಒತ್ತಡ ಇತ್ತೆ? ಆಂತರಿಕ ಬಾಂಧವ್ಯ ಇತ್ತೆ. ನೀವು ಸಿಎಂ ಆಗಿದ್ದವರು, ಹೀಗೆಲ್ಲಾ ಮಾತಾಡಿ ನಗೆಪಾಟಲಿಗೆ ಈಡಾಗಬೇಡಿ. ನಮಗೆ ಜೆಡಿಎಸ್ ಪಕ್ಷದ ಮೇಲೆ ಗೌರವ ಇದೆ. ಹೀಗೆಲ್ಲಾ ಮಾತಾಡಬೇಡಿ ಎಂದು ಕುಟುಕಿದ್ದಾರೆ.








