ಕೋಲ್ಕತ್ತಾ: ರೆಮಲ್ ಚಂಡಮಾರುತದಿಂದ (Remal Cyclone) ದೇಶದ ಹಲವು ಭಾಗಗಳಲ್ಲಿ ಭಾರೀ ನಷ್ಟ ಉಂಟಾಗುತ್ತಿದೆ. ಭಾರೀ ಮಳೆಗೆ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕನಿಷ್ಠ 37 ಜನ ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
ವ್ಯಾಪಕ ಮಳೆಯಿಂದಾಗಿ ಹಲವಾರು ಮನೆಗಳು ಧ್ವಂಸಗೊಂಡಿವೆ. ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಹಲವಾರು ಜನರು ಮನೆ ಕಳೆದುಕೊಂಡು ಪರಿಹಾರ ಶಿಬಿದರದಲ್ಲಿ ಆಶ್ರಯ ಪಡೆದಿದ್ದಾರೆ. ಮಿಜೋರಾಂನಲ್ಲಿ ರೆಮಲ್ ನಿಂದಾಗಿ ಅತೀ ಹೆಚ್ಚು ನಷ್ಟ ಉಂಟಾಗಿದೆ. ಆಸ್ಸಾಂನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 18 ಜನ ಗಂಭೀರವಾಗಿದ್ದಾರೆ. ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು 12 ಮಕ್ಕಳು ಗಾಯಗೊಂಡಿದ್ದಾರೆ. ನಾಗಾಲ್ಯಾಂಡ್ ನಲ್ಲಿ ನಾಲ್ವರು ಚಂಡಮಾರುತಕ್ಕೆ ಬಲಿಯಾಗಿದ್ದಾರೆ. 40ಕ್ಕೂ ಅಧಿಕ ಮನೆಗಳು ಹಾನಿಯಾಗಿವೆ. ಮೇಘಾಲಯದಲ್ಲಿ ಭಾರೀ ಮಳೆ ಸುರಿದು ಇಬ್ಬರು ಬಲಿಯಾಗಿದ್ದಾರೆ.
ಮಿಜೋರಾಂನ ರಾಜಧಾನಿ ಐಜ್ವಾಲ್‌ನ ಮೆಲ್ತಮ್, ಹ್ಲಿಮೆನ್, ಫಾಲ್ಕಾವ್ನ್ ಮತ್ತು ಸೇಲಂ ವೆಂಗ್ ಪ್ರದೇಶಗಳಲ್ಲಿ 27 ಜನ ಬಲಿಯಾಗಿದ್ದಾರೆ.ಇಲ್ಲಿಯವರೆಗೆ ಇದುವರೆಗೆ 27 ಜನರ ಮೃತದೇಹ ಹೊರ ತೆಗೆಯಲಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಸಿಎಂ ಲಾಲ್ದುಹೋಮ, ಮೃತರ ಕುಟುಂಬಸ್ಥರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಒಟ್ಟು ಸಾವಿನ ಸಂಖ್ಯೆ 37ಕ್ಕೆ ಏರಿದೆ. ತ್ರಿಪುರಾದಲ್ಲಿ ಕೂಡ ಚಂಡಮಾರುತದ ಆರ್ಭಟ ಇದ್ದು, 746 ಜನರು ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕರಾವಳಿಯಾದ್ಯಂತ ಗಾಳಿಯ ವೇಗ ಗಂಟೆಗೆ 135 ಕಿ.ಮೀ. ಇದೆ. ಇದರಿಂದಾಗಿ ಲಕ್ಷಾಂತರ ಜನ ಪರದಾಟ ನಡೆಸಿದ್ದಾರೆ.