ಉತ್ತರ ಪ್ರದೇಶದ ಶಹಜಹಾನಾಬಾದ್ ಜಿಲ್ಲೆಯಲ್ಲಿ ಯುವತಿಯೊಬ್ಬಳಿಗೆ ತನ್ನ ಲೆಸ್ಬಿಯನ್ ಪ್ರೇಮಿಯನ್ನು ಮದುವೆಯಾಗುವುದಕ್ಕಾಗಿ ಲಿಂಗ ಬದಲಾಯಿಸುವುದಾಗಿ ಭರವಸೆ ನೀಡಿ ನಂತರ ಆಕೆಯನ್ನು ತಂತ್ರಿಯೊಬ್ಬಾತ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತಳನ್ನು ಆರ್ ಸಿ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪೂನಂ ಎಂದು ಗುರುತಿಸಲಾಗಿದೆ. ಪೂನಂ ಪುವಾಯನ್ ನಿವಾಸಿ ಪ್ರೀತಿ ಎಂಬಾಕೆಯೊಂದಿಗೆ ಸ್ನೇಹ ಬೆಳೆಸಿದ್ದಳು. ನಂತರ ಇಬ್ಬರೂ ಸಲಿಂಗ ಸಂಬಂಧ ಹೊಂದಿದ್ದರು. ಪೂನಂ ಜೊತೆಗಿನ ಸಂಬಂಧ ಬೆಳಕಿಗೆ ಬಂದ ನಂತರ ಪ್ರೀತಿಗೆ ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರೀತಿ ಹಾಗೂ ಆಕೆಯ ತಾಯಿ ಊರ್ಮಿಳಾ. ತಂತ್ರಿ ರಾಮ್ ನಿವಾಸ್ ಅವರನ್ನು ಭೇಟಿಯಾಗಿ ಪೂನಂಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಪೂನಂ ಪುರುಷನಾಗಲು ಬಯಸಿರುವುದಾಗಿ ಪ್ರೀತಿ, ತಂತ್ರಿಗಳಿಗೆ ಹೇಳಿದ್ದಾಳೆ. ಇದರ ಲಾಭ ಪಡೆದ ಪ್ರೀತಿಯ ತಾಯಿ ಪೂನಂಳನ್ನು ಕೊಲ್ಲಲು 1.5 ಲಕ್ಷ ರೂ. ನೀಡುವುದಾಗಿ ತಂತ್ರಿಗಳಿಗೆ ಭರವಸೆ ನೀಡಿದ್ದಳು ಎಂದು ತಿಳಿದು ಬಂದಿದೆ. ತಂತ್ರಿಗಳಿಗೆ ಮುಂಗಡವಾಗಿ 5 ಸಾವಿರ ರೂ.ಗಳನ್ನು ನೀಡಿದ್ದು, ಪೂನಂಳನ್ನು ಕೊಲೆ ಮಾಡಿದ ನಂತರ ಉಳಿದ ಮೊತ್ತವನ್ನು ನೀಡುವುದಾಗಿ ಹೇಳಿದ್ದಳು.
ಅವರು ಹಾಕಿಕೊಂಡ ಯೋಜನೆಯಂತೆ ಪ್ರೀತಿಯು ಪೂನಂಗೆ ಕರೆ ಮಾಡಿದ್ದಾಳೆ. ತಂತ್ರಿ ನಿನ್ನ ಲಿಂಗವನ್ನು ಬದಲಾಯಿಸುತ್ತಾನೆ ಎಂದು ಎಂದು ಹೇಳಿದ್ದಾಳೆ. ಹೀಗಾಗಿ ಪೂನಂ ಏಪ್ರೀಲ್ 18ರಿಂದ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಮರಳಿ ಬಾರದಿರುವುದಕ್ಕೆ ಮನೆಯವರು ದೂರು ದಾಖಲಿಸಿದ್ದರು.
ಪೂನಂ, ಪ್ರೀತಿ ಹಾಗೂ ರಾಮ್ ನಿವಾಸ್ ಮಾತನಾಡಿರುವ ಫೋನ್ ಕಾಲ್ ರೆಕಾರ್ಡ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ರಾಮನಿವಾಸ್ ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆತ ತಪ್ಪು ಒಪ್ಪಿಕೊಂಡಿದ್ದಾನೆ. ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣು ಮುಚ್ಚಿ ಮಲಗುವಂತೆ ಹೇಳಿದ್ದಾಗಿ ಪೊಲೀಸರಿಗೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಸುತ್ತಿಗೆಯಿಂದ ಪೂನಂ ಕುತ್ತಿಗೆ ಸೀಳಿದ್ದಾನೆ. ನಂತರ ತಂತ್ರಿ ಪೂನಂ ದೇಹವನ್ನು ಪೊದೆಗಳಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಂತ್ರಿ ಹಾಗೂ ಪ್ರೀತಿಯನ್ನು ಬಂಧಿಸಲಾಗಿದ್ದು, ಊರ್ಮಿಳಾಗಾಗಿ ಹುಡುಕಾಟ ನಡೆಯುತ್ತಿದೆ.








