ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಟ್ವೀಟ್ ಸಮರ ಮುಂದುವರಿದಿದೆ. ಕೊರೊನಾ ವಿಚಾರದಲ್ಲಿ ಸರ್ಕಾರ ಹಗರಣ ಮಾಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದು, ಈ ವಿಚಾರವಾಗಿ ರಾಮುಲು, ಟಗರಿಗೆ ಟ್ವೀಟ್ ಬಾಣಗಳನ್ನು ಬಿಡುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಶ್ರೀರಾಮುಲು, ‘ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರಗಳ ಮೇಲೆ ಆರೋಪ ಮಾಡೋದಕ್ಕೂ ಮುನ್ನ, ತಾವು ಕಾಶ್ಮೀರದಿಂದ-ಕನ್ಯಾಕುಮಾರಿಯವರೆಗೂ ಆರೋಪ ಮಾಡಿ ಆರೋಪಿಗಳಾಗಿರುವ ನಿಮ್ಮ ಪಕ್ಷದ ‘ರಾಜ’-‘ಮಹಾರಾಜ’ ರ ಬಗ್ಗೆ ಗಮನ ಹರಿಸುವುದು ಒಳಿತಲ್ಲವೇ ಸಿದ್ದರಾಮಯ್ಯನವರೇ’ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ‘ಸಿದ್ದರಾಮಯ್ಯನವರೇ, ನಾಡು ಸಂಕಷ್ಟದಲ್ಲಿದೆ, ಜನರು ಸಮಸ್ಯೆಯಲ್ಲಿದ್ದಾರೆ. ಕೊರೊನಾವನ್ನು ಗೆಲ್ಲಬೇಕಿದೆ. ಇದು ಕೆಲಸ ಮಾಡೋ ಸಮಯ. ನಾಡಿನ ಜನತೆಗೆ ಕೆಲಸ ಮಾಡಿ, ಕೆಲಸ ಮಾಡಲು ಬಿಡಿ. ನಿಮ್ಮಿಂದ ಇಷ್ಟು ಕನಿಷ್ಟ ಮಟ್ಟದ ಸಹಕಾರವನ್ನು ಜನತೆಯ ಪರವಾಗಿ ಕೇಳುತ್ತೇನೆ’ ಎಂದು ಹರಿಹಾಯ್ದಿದ್ದಾರೆ. 







