ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳು ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ರೌಡಿಶೀಟರ್ (Rowdy Sheeter) ಪವನ್ ಅಲಿಯಾಸ್ ಕಡುಬು ಎಂಬ ಪುಡಿ ರೌಡಿ, ಇತ್ತೀಚೆಗೆ ಯುವಕನ ಬಟ್ಟೆ ಬಿಚ್ಚಿಸಿ ನಡು ರಸ್ತೆಯಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಖದಲ್ಲಿ ರಕ್ತ ಬರುವಂತೆ ಹೊಡೆದು, ಆವಾಜ್ ಹಾಕಿ ಬಟ್ಟೆ ಬಿಚ್ಚಿಸಿದ್ದಾನೆ ಎನ್ನಲಾಗಿದೆ.
ಕಾಮಾಕ್ಷಿಪಾಳ್ಯ ಠಾಣಾ (kamakshipalya Police Station) ವ್ಯಾಪ್ತಿಯ ಸುಂಕದಕಟ್ಟೆ ಹತ್ತಿರ ಈ ಘಟನೆ ನಡೆದಿದೆ. ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಯುವಕ ಬೆತ್ತಲಾಗಿಯೇ ಓಡಿ ಹೋಗಿದ್ದಾನೆ. ಸದ್ಯ ಆರೋಪಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.