ಜಾತಿ ನಿಂದನೆ ಪ್ರಕರಣ : ಅರೆಸ್ಟ್ ಆಗಿ ರಿಲೀಸ್ ಆದ ಯುವರಾಜ್ ಸಿಂಗ್
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಜಾತಿ ನಿಂದನೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದು, ರಿಲೀಸ್ ಆಗಿದ್ದಾರೆ. ಕೋರ್ಟ್ ನೀಡಿದ ಜಾಮೀನಿನ ಮೇಲೆ ಯುವಿ ಬಿಡುಗಡೆಗೊಂಡಿದ್ದಾರೆ. ಇನ್ ಸ್ಟಾಗ್ರಾಮ್ ಲೈವ್ ಚಾಟ್‍ನಲ್ಲಿ ಯುವರಾಜ್ ಸಿಂಗ್, ಯಜುವೇಂದ್ರ ಚಹಾಲ್ ಜಾತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಯುವರಾಜ್ ಕ್ಷಮೆ ಕೇಳಿದ್ದರು. ಆದರೆ ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಯುವರಾಜ್ ಸಿಂಗ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದೂರುದಾರ ರಜತ್ ಕಾಲ್ಸನ್, ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿ ದಾಖಲಾದ ಪ್ರಕರಣಕ್ಕೆ ಜಾಮೀನು ನೀಡಿದ್ದರಿಂದ ಇದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಸಮುದಾಯಕ್ಕೆ ಅವಮಾನ ಮಾಡಿದ್ದರಿಂದ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ. 2020ರ ಜೂನ್ ತಿಂಗಳಿನಲ್ಲಿ ರೋಹಿತ್ ಶರ್ಮಾ ಜೊತೆ ಇನ್ ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ಯುವರಾಜ್ ಸಿಂಗ್, ಯಜುವೇಂದ್ರ ಚಹಲ್ ಅವರನ್ನು ʼಭಂಗಿʼ ಎಂದು ಕರೆದಿದ್ದರು. ಈ ವಿಚಾರಕ್ಕೆ ವಕೀಲ ರಜತ್ ಕಾಲ್ಸನ್ ದೂರು ನೀಡಿದ್ದರು. ಆದರೆ 8 ತಿಂಗಳ ಬಳಿಕ ಹಿಸ್ಸಾರ್ ಜಿಲ್ಲೆಯ ಹಂಸಿ ಠಾಣೆಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ರೋಹಿತ್ ಶರ್ಮಾ ಜೊತೆಗಿನ ಸಂವಾದಲ್ಲಿ ಕುಲದೀಪ್ ಮತ್ತು ಯಜುವೇಂದ್ರ ಚಾಹಲ್ ಇದ್ದರು. ಯುವಿ ಅವರ ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿಂದೆ ಸ್ಪಷ್ಟನೆ ನೀಡಿದ್ದ ಯುವಿ ನನಗೆ ಜಾತಿ, ಬಣ್ಣ, ಧರ್ಮ ಅಥವ ಲಿಂಗ ಯಾವುದೇ ರೀತಿಯ ಅಸಮಾನತೆಯ ಬಗ್ಗೆ ನಂಬಿಕೆಯಿಲ್ಲ. ಜನರ ಕಲ್ಯಾಣವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಇದನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದರು. ಸ್ನೇಹಿತರ ಜೊತೆಗಿನ ಸಂವಾದದ ವೇಳೆ ಅನಗತ್ಯವಾಗಿ ಅಪಾರ್ಥವಾಗಿದೆ. ನಾನು ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸಿಲ್ಲ. ನನ್ನ ಮಾತುಗಳಿಂದ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.