ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡದಿದ್ದರೇ ಚುನಾವಣೆಯಲ್ಲಿ ಉತ್ತರ : ಡಿಕೆಶಿ
ಹಾವೇರಿ : ಮುಂದಿನ ದಿನಗಳಲ್ಲಿ ಎಲ್ಪಿಜಿ, ಅಡುಗೆ ಎಣ್ಣೆ, ಸಿಮೆಂಟ್, ಕಬ್ಬಿಣ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡದಿದ್ದರೆ ಇತರೆ ಚುನಾವಣೆಗಳಲ್ಲೂ ಇದೇ ಉತ್ತರ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಡಿಕೆಶಿವಕುಮಾರ್ ಹಾನಗಲ್ ಕ್ಷೇತ್ರಕ್ಕೆ ಭೇಟಿ ನೀಡಿ ಮತದಾರರಿಗೆ ಧನ್ಯವಾದ ತಿಳಿಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣಾ ಪ್ರಚಾರದಲ್ಲಿ ನಾವು ಭಾಷಣ ಮಾಡಲಿಲ್ಲ, ಕ್ಷೇತ್ರದ ಜನರನ್ನ ಸರ್ಕಾರ ಘೋಷಿಸಿದ ಲಾಕ್ಡೌನ್ ಪರಿಹಾರ ಸಿಕ್ಕಿತೆ? ಕೋವಿಡ್ ಸಂಕಷ್ಟದಲ್ಲಿ ಸರ್ಕಾರ ನಿಮ್ಮ ಸಹಾಯಕ್ಕೆ ಬಂದಿತೆ? ನಿಮ್ಮ ಆದಾಯ ಡಬಲ್ ಆಯಿತೆ? ನಿಮ್ಮ ಮಕ್ಕಳಿಗೆ ಉದ್ಯೋಗ ನೀಡಿತೆ? ಎಂಬ ಪ್ರಶ್ನೆ ಕೇಳುತ್ತಾ ಹೋದೆವು, ಅದಕ್ಕೆ ಜನರು ಕೊಟ್ಟ ಉತ್ತರ, ಇಲ್ಲ..!
ಉಪ ಚುನಾವಣೆಗಳಲ್ಲಿ ಮತದಾರರು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳಿಗೆ ತಮ್ಮ ಉತ್ತರ ನೀಡಿದ್ದಾರೆ. ಹಾಗಾಗಿ ಇಂಧನ ಬೆಲೆ ಸ್ವಲ್ಪ ಇಳಿಸಲಾಗಿದೆ! ಮುಂದಿನ ದಿನಗಳಲ್ಲಿ ಎಲ್ಪಿಜಿ, ಅಡುಗೆ ಎಣ್ಣೆ, ಸಿಮೆಂಟ್, ಕಬ್ಬಿಣ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡದಿದ್ದರೆ ಇತರೆ ಚುನಾವಣೆಗಳಲ್ಲೂ ಇದೇ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.









