5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
1. ಹೆಸರು ಬೇಳೆ – ನವಣೆ ಅಕ್ಕಿ ದೋಸೆ
ಬೇಕಾಗುವ ಪದಾರ್ಥಗಳು
ಹೆಸರು ಬೇಳೆ – 3/4 ಕಪ್
ನವಣೆ ಅಕ್ಕಿ – 3/4 ಕಪ್
ಶುಂಠಿ – 1 ಇಂಚು
ಹಸಿರು ಮೆಣಸು – 2
ಜೀರಿಗೆ – 1 ಚಮಚ
ರುಚಿಗೆ ತಕ್ಕಂತೆ ಉಪ್ಪು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ/ತುಪ್ಪ
ಮಾಡುವ ವಿಧಾನ
ಮೊದಲಿಗೆ ಹೆಸರು ಬೇಳೆಯನ್ನು ಮೊಳಕೆ ಬರಿಸಿಕೊಳ್ಳಿ.
ನವಣೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಕನಿಷ್ಠ 2-3 ಗಂಟೆಗಳ ಕಾಲ ನೆನೆಸಿಡಿ. ನಂತರ ನೆನೆದ ನವಣೆ ಅಕ್ಕಿಯನ್ನು ನೀರಿನಿಂದ ಸೋಸಿ. ಮಿಕ್ಸರ್ ಗೆ ನವಣೆ ಅಕ್ಕಿ, ಹೆಸರು ಕಾಳು, ಶುಂಠಿ, ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ರುಬ್ಬಿ. ನಂತರ 1/2 ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ದೋಸೆ ಕಾವಲಿಯನ್ನು ಬಿಸಿ ಮಾಡಿ. ಕಾದಾಗ ಸ್ವಲ್ಪ ಎಣ್ಣೆ/ತುಪ್ಪ ಸವರಿ. ನಂತರ ರುಬ್ಬಿಕೊಂಡ ಹಿಟ್ಟನ್ನು ಕಾವಲಿ ಮೇಲೆ ವೃತ್ತಾಕಾರದಲ್ಲಿ ಹರಡಿ. ಎಣ್ಣೆಯನ್ನು ಚಿಮುಕಿಸಿ, ಎರಡು ಬದಿಗಳನ್ನು ಚೆನ್ನಾಗಿ ಬೇಯಿಸಿ.
2. ಸಿಹಿಯಾದ ಬ್ರೆಡ್ ಗುಲಾಬ್ ಜಾಮೂನ್
ಬೇಕಾಗುವ ಪದಾರ್ಥಗಳು
ಸಕ್ಕರೆ – 1 ಕಪ್
ನೀರು – 1/2 ಕಪ್
ಏಲಕ್ಕಿ ಪುಡಿ – 1 1/2 ಟೀಸ್ಪೂನ್
ಡ್ರೈ ಫ್ರೂಟ್ಸ್ – ಸ್ವಲ್ಪ
ಗುಲ್ಕಂಡ್ / ರೋಸ್ ಪೆಟಲ್ ಜಾಮ್ – 1 ಚಮಚ
ಬ್ರೆಡ್ ಚೂರುಗಳು – 6
ಅಡಿಗೆ ಸೋಡಾ ಚಿಟಿಕೆಯಷ್ಟು
ಅಗತ್ಯವಿರುವಷ್ಟು ಹಾಲು
ಮಾಡುವ ವಿಧಾನ
ಪ್ಯಾನ್ ಅನ್ನು ಹೆಚ್ಚಿನ ಶಾಖದಲ್ಲಿ ಬಿಸಿ ಮಾಡಿ.ಸಕ್ಕರೆ ಮತ್ತು ನೀರು ಸೇರಿಸಿ. ಚೆನ್ನಾಗಿ ಬೆರೆಸಿ.
ಸಕ್ಕರೆ ಕರಗಿದಾಗ ಮತ್ತು ಸಿರಪ್ ಕುದಿ ಬರಲು ಪ್ರಾರಂಭವಾದಾಗ ಸಣ್ಣ ಉರಿಯಲ್ಲಿ 7-8 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಕೆಳಗಿಳಿಸಿ.
ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಸಕ್ಕರೆ ಪಾಕ ರೆಡಿಯಾಗಿದೆ.
ಒಂದು ಪಾತ್ರೆಯಲ್ಲಿ ಗುಲ್ಕಂಡ್ (ಗುಲಾಬಿ ದಳಗಳ ಜಾಮ್) ತೆಗೆದುಕೊಳ್ಳಿ. ಅದಕ್ಕೆ ಡ್ರೈ ಫ್ರೂಟ್ಸ್ ( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ) ಸೇರಿಸಿ.
ಚೆನ್ನಾಗಿ ಮಿಶ್ರ ಮಾಡಿ. ಇದನ್ನು ಸ್ವಲ್ಪ ಸಮಯದವರೆಗೆ ರೆಫ್ರಿಜರೇಟರ್ನಲ್ಲಿ ಇರಿಸಿ.
ಬ್ರೆಡ್ ತುಂಡುಗಳನ್ನು ತೆಗೆದುಕೊಳ್ಳಿ. ಬ್ರೆಡ್ ನ ಅಂಚುಗಳನ್ನು ಕತ್ತರಿಸಿ. ಈಗ ಬ್ರೆಡ್ ಅನ್ನು ಸಣ್ಣ ತುಂಡುಗಳನ್ನು ಮಾಡಿ ಪುಡಿ ಮಾಡಿ. ಅದಕ್ಕೆ ಅಡಿಗೆ ಸೋಡಾ ಸೇರಿಸಿ. ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
ಬ್ರೆಡ್ ಗೆ ಅನುಗುಣವಾಗಿ ಹಾಲಿನ ಪ್ರಮಾಣವನ್ನು ಹೊಂದಿಸಿ. ಅರೆ ಮೃದುವಾದ ಹಿಟ್ಟನ್ನು ತಯಾರಿಸಿ. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ.
ರೆಫ್ರಿಜರೇಟರ್ನಲ್ಲಿ ಇರಿಸಿದ ಮಿಶ್ರಣದ ಜೊತೆ ಬೆರೆಸಿಕೊಳ್ಳಿ.
ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮಾಡಿಟ್ಟುಕೊಂಡ ಸಣ್ಣ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ. ಕಡಿಮೆ ಶಾಖದಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಸಿಹಿಯಾದ ಗುಲಾಬ್ ಜಾಮೂನ್‌ಗಳು ಸವಿಯಲು ಸಿದ್ಧವಾಗಿದೆ.
5 ಸುಲಭ, ಆರೋಗ್ಯಕರ ಮತ್ತು ರುಚಿಕರ ತರಕಾರಿ ಚೆಟ್ನಿ, ಪಲ್ಯಗಳ ರೆಸಿಪಿಗಳು..!
3. ಶೇಂಗಾ/ನೆಲಕಡಲೆ ಲಡ್ಡು
ಬೇಕಾಗುವ ಸಾಮಗ್ರಿಗಳು
ಶೇಂಗಾ/ನೆಲಕಡಲೆ – 2 ಕಪ್
ಬೆಲ್ಲ – 2 ಕಪ್
ತುಪ್ಪ – 2 ಚಮಚ
ಮಾಡುವ ವಿಧಾನ:
ಮೊದಲಿಗೆ ಶೇಂಗಾ/ನೆಲಕಡಲೆಯನ್ನು ಸಣ್ಣ ಉರಿಯಲ್ಲಿ ಹುರಿದು, ನಂತರ ಅದರ ಸಿಪ್ಪೆಗಳನ್ನು ತೆಗೆಯಿರಿ. ಬಳಿಕ ಹುಡಿ ಮಾಡಿಕೊಳ್ಳಿ.
ನಂತರ ಬಾಣಲೆ ಬಿಸಿ ಮಾಡಿ ಬೆಲ್ಲ ಸೇರಿಸಿ, ಸ್ವಲ್ಪ ನೀರಿನ ಜೊತೆ ಕುದಿಸಿ. ಪಾಕ ಬಂದ ಬಳಿಕ ಅದಕ್ಕೆ ತುಪ್ಪವನ್ನು ಸೇರಿಸಿ. ನಂತರ ಅದಕ್ಕೆ ಹುಡಿ ಮಾಡಿಕೊಂಡ ಶೇಂಗಾ/ನೆಲಕಡಲೆ ಹುಡಿಯನ್ನು ಸೇರಿಸಿ. ಚೆನ್ನಾಗಿ ಬೆರೆಸಿ. ಒಲೆಯಿಂದ ಕೆಳಗಿಳಿಸಿ, ಪಾಕ ಆರಿದ ನಂತರ ಉಂಡೆ ಕಟ್ಟಿ. ರುಚಿಯಾದ ಶೇಂಗಾ/ನೆಲಕಡಲೆ ಲಡ್ಡು ಸವಿಯಲು ಸಿದ್ಧವಾಗಿದೆ.
ಸಂಜೆ ಸ್ನಾಕ್ಸ್ ಗೆ 5 ಆರೋಗ್ಯಕರ ಹಾಗೂ ರುಚಿಕರ ತಿನಿಸುಗಳ ರೆಸಿಪಿಗಳು..!
4. ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು
ಕಡ್ಲೆ ಬೇಳೆ – 2 ಚಮಚ
ಅಕ್ಕಿಹಿಟ್ಟು – 1/2 ಕೆಜಿ
ಮೆಣಸಿನ ಹುಡಿ – 1 ಚಮಚ
ಹುರಿಗಡಲೆ ಹುಡಿ – 1 ಚಮಚ
ತುಪ್ಪ – 2 ಚಮಚ
ತೆಂಗಿನಕಾಯಿ ತುರಿ – 1/2 ಕಪ್
ಬಿಳಿ ಎಳ್ಳು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಕಡ್ಲೆ ಬೇಳೆಯನ್ನು ನೀರಿನಲ್ಲಿ ಒಂದು ಗಂಟೆ ನೆನೆಸಿಡಿ. ನಂತರ ಅಕ್ಕಿಹಿಟ್ಟನ್ನು ಪಾನ್ ನಲ್ಲಿ ಸ್ವಲ್ಪ ಹುರಿದು ಬೆಚ್ಚಗೆ ಮಾಡಿ. ಈಗ ಒಂದು ಪಾತ್ರೆಗೆ ಹುರಿದ ಅಕ್ಕಿಹಿಟ್ಟು, ನೆನೆಸಿದ ಕಡ್ಲೆಬೇಳೆ, ಮೆಣಸಿನ ಪುಡಿ, ಹುರಿಗಡಲೆ ಹುಡಿ, ತುಪ್ಪ, ಬಿಳಿ ಎಳ್ಳು, ತೆಂಗಿನ ತುರಿ, ಉಪ್ಪು, ಇಂಗು, ಹೆಚ್ಚಿದ ಕರಿಬೇವು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಅದನ್ನು ತಟ್ಟಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈಗ ರುಚಿಯಾದ ಗರಿಗರಿಯಾದ ನಿಪ್ಪಟ್ಟು ಸವಿಯಲು ಸಿದ್ಧ.
5 ಸುಲಭ , ರುಚಿಕರ , ಆರೋಗ್ಯಕರ ಸಾರು , ಗೊಜ್ಜು , ಗ್ರೇವಿ ರೆಸಿಪಿಗಳು..!
5. ತರಕಾರಿ ಕಟ್ಲೇಟ್
ಬೇಕಾಗುವ ಸಾಮಗ್ರಿಗಳು
ಕತ್ತರಿಸಿದ ಕ್ಯಾರೆಟ್ – 1/2 ಕಪ್
ಕತ್ತರಿಸಿದ ಬೀನ್ಸ್ – 1/2 ಕಪ್
ಬಟಾಣಿ – 1/4 ಕಪ್
ಕತ್ತರಿಸಿದ ಆಲೂಗಡ್ಡೆ – 1 ಕಪ್
ಬ್ರೆಡ್ ಕ್ರಂಬ್ – 1 ಕಪ್
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಸಿಮೆಣಸು -2
ಈರುಳ್ಳಿ – 1/4 ಕಪ್
ಕೊತ್ತಂಬರಿ ಹುಡಿ – 1/2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಮೈದಾ – 3 ಚಮಚ
ಗರಂ ಮಸಾಲೆ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮೆಣಸಿನ ಪುಡಿ – 1/2 ಚಮಚ
ಸಾಸಿವೆ – 1 ಚಮಚ
ಎಣ್ಣೆ – 2 ಚಮಚ
ನೀರು – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆಗಳನ್ನು ಬೇಯಿಸಿಟ್ಟುಕೊಳ್ಳಿ. ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ. ಅದು ಸಿಡಿದ ಬಳಿಕ ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಹಸಿಮೆಣಸು ಸೇರಿಸಿ ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗುವವರೆಗೆ ತಿರುವಿಕೊಳ್ಳಿ. ನಂತರ ಇದಕ್ಕೆ ಬ್ರೆಡ್ ಕ್ರಂಬ್ಸ್ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರ ಮಾಡಿ.
ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ತರಕಾರಿ, ಮೆಣಸಿನ ಪುಡಿ, ಕೊತ್ತಂಬರಿಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದು ಹಿಟ್ಟಿನ ಹದಕ್ಕೆ ಬರುವವರೆಗೆ ಬೇಯಿಸಿಕೊಂಡು ಕಟ್ಲೆಟ್ ಮಾಡಿಕೊಳ್ಳಿ. ಬಳಿಕ ಮೈದಾ ಹಿಟ್ಟಿಗೆ ಸ್ವಲ್ಪ ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ಮಾಡಿಕೊಳ್ಳಿ. ಈಗ ತವಾ ಬಿಸಿ ಮಾಡಿ. ನಂತರ ಕಟ್ಲೆಟ್ ಅನ್ನು ಮೈದಾ ಹಿಟ್ಟಿನಲ್ಲಿ ಮುಳುಗಿಸಿ ಬ್ರೆಡ್ ಕ್ರಂಬ್ಸ್ ಇರುವ ತಟ್ಟೆಯಲ್ಲಿ ಅದ್ದಿ ತವಾದಲ್ಲಿ ಕಾಯಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ ತೆಗೆಯಿರಿ.