ಅಮೀರ್ ಖಾನ್ ಕಾಣಿಸಿಕೊಂಡಿರುವ ಜಾಹೀರಾತು ಹಿಂದೂ ವಿರೋಧಿ – ಅನಂತ್ ಕುಮಾರ್ ಹೆಗಡೆ
ಬಾಲಿವುಡ್ ನಟ ಅಮೀರ್ ಖಾನ್ ಹೆಚ್ಚಾಗಿ ಟ್ರೋಲ್ ಗೆ ಗುರಿಯಾಗಗೋ ಭಾರತದ ನಟರ ಪೈಕಿ ಒಬ್ರು ಅಂದ್ರೆ ತಪ್ಪಾಗಲ್ಲ. ಆಗಾಗ ನೆಟ್ಟಿಗರಿಂದ ಅಮೀರ್ ಖಾನ್ ಟೀಕೆಗಳಿಗೆ ಗುರಿಯಾಗುತ್ತಲೇ ಇರುತ್ತಾರೆ. ಇದೇನು ಅವರಿಗೆ ಹೊಸ ವಿಚಾರವೇನಲ್ಲ. ಇದೀಗ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಬಾಲಿವುಡ್ ನ “ಮಿಸ್ಟರ್ ಪರ್ಫೆಕ್ಟ್” ವಿರುದ್ಧ ಕಿಡಿಕಾರಿದ್ದಾರೆ. ಅಮೀರ್ ಖಾನ್ ಇತ್ತೀಚೆಗೆ ನೀಡಿರುವ ಜಾಹೀರಾತಿನ ವಿರುದ್ಧ ಆಕ್ರೋಶಗೊಂಡಿರುವ ಅನಂತ್ ಕುಮಾರ್ ಹೆಗಡೆ ಒಂದು ಪೋಸ್ಟ್ ಹಾಕಿದ್ದಾರೆ.
ಅಮೀರ್ ಖಾನ್ ನೀಡಿರುವ ಟೈರ್ ನ ಎರಡು ನಿಮಿಷದೊಳಗಿನ ಸಣ್ಣ ಜಾಹೀರಾತು ಅನಂತ್ ಕುಮಾರ್ ಅವರನ್ನ ಕೆರಳಿಸಿದೆ. ಈ ಜಾಹೀರಾತು ಹಿಂದು ಧರ್ಮದ ಆಚರಣೆಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದ್ದಾರೆ. ಹೌದು ಅಮೀರ್ ಸಿಯೆಟ್ ಟೈರ್ ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ನಮ್ಮ ಕ್ರಿಕೆಟ್ ಟೀಮ್ ಇಂದು ಗೆದ್ದರೆ ಜೋರಾಗಿ ಪಟಾಕಿ ಹೊಡೆಯೋಣ , ಆದ್ರೆ ನಮ್ಮ ಅಪಾರ್ಟ್ಮೆಂಟ್ ಕಾಂಪೌಂಡ್ ನ ಒಳಗೆ, ರಸ್ತೆಯಲ್ಲ ಎನ್ನುತ್ತಾರೆ. ಆ ನಂತರದ ದೃಶ್ಯದಲ್ಲಿ ಅಮೀರ್ ಖಾನ್ ಮತ್ತು ತಂಡ ರಸ್ತೆಯಲ್ಲಿ ಪಟಾಕಿ ಹೊಡೆಯುತ್ತಿರುತ್ತಾರೆ. ಇದರಿಂದ ರಸ್ತೆಯಲ್ಲಿ ಗಾಡಿ ಓಡಿಸುವವರು ತೊಂದರೆ ಪಡಬೇಕಾಗುತ್ತದೆ.
ರಸ್ತೆ ಸುರಕ್ಷತೆ, ರಸ್ತೆಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಆದ್ರೆ ಈ ಜಾಹೀರಾತನ್ನು ಅನಂತ್ ಕುಮಾರ್ ಹೆಗಡೆ, ಹಿಂದು ವಿರೋಧಿ ಜಾಹೀರಾತೆಂದು ಆರೋಪಿಸಿದ್ದು, ಸಿಯೆಟ್ ಮಾಲೀಕ ಆನಂದ್ ವರದನಾತ್ ಗೋಯೆಂಕಾಗೆ ಪತ್ರವನ್ನು ಬರೆದಿದ್ದಾರೆ. ಪತ್ರದ ಪ್ರತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
”ರಸ್ತೆಯಲ್ಲಿ ಪಟಾಕಿ ಸಿಡಿಸಬೇಡಿ ಎಂದಿರುವ ನಿಮ್ಮ ಜಾಹೀರಾತಿಗೆ ನನ್ನ ಮೆಚ್ಚುಗೆ ಇದೆ. ಆದರೆ ರಸ್ತೆಯಲ್ಲಿ ಜನರು ಎದುರಿಸುತ್ತಿರುವ ಇತರೆ ಸಮಸ್ಯೆಗಳ ಬಗ್ಗೆಯೂ ಗಮನ ವಹಿಸಿ. ಪ್ರತಿ ಶುಕ್ರವಾರ ಪ್ರಾರ್ಥನೆ ಹೆಸರಿನಲ್ಲಿ ರಸ್ತೆ ಬಂದ್ ಮಾಡುವುದು. ಹಬ್ಬ, ಉರುಸ್ ಆಚರಣೆಗೆ ರಸ್ತೆ ಬಂದ್ ಮಾಡುವ ಬಗ್ಗೆಯೂ ನಿಮ್ಮ ಜಾಹಿರಾತುಗಳು ಗಮನ ವಹಿಸಲಿ. ಅಲ್ಲದೆ ಶಬ್ದ ಮಾಲಿನ್ಯದ ಬಗ್ಗೆಯೂ ನಿಮ್ಮ ಸಂಸ್ಥೆ ಗಮನ ವಹಿಸಲಿ, ಲೌಡ್ ಸ್ಪೀಕರ್ ಬಳಕೆ ಸೇರಿದಂತೆ ಇನ್ನೂ ಹಲವು ವಿಚಾರಗಳನ್ನ ಪತ್ರದಲ್ಲಿ ತಿಳಿಸಿದ್ದಾರೆ.
”ನೀವು ಹಿಂದು ಸಮುದಾಯವರಾಗಿದ್ದು, ಹಿಂದು ಧರ್ಮೀಯರ ಮೇಲೆ ಶತಮಾನಗಳಿಂದ ಆಗುತ್ತ ಬಂದಿರುವ ಅನ್ಯಾಯದ ಬಗ್ಗೆ ನಿಮಗೂ ಅರಿವಿದೆ ಎಂದುಕೊಂಡಿದ್ದೇನೆ. ಕೆಲವು ಹಿಂದು ವಿರೋಧಿ ನಟರು ಸದಾ ಹಿಂದು ಸಂಪ್ರದಾಯಗಳನ್ನು ಟೀಕಿಸುವಲ್ಲಿ ನಿರತರಾಗಿರುತ್ತಾರೆ. ತಮ್ಮದೇ ಸಮುದಾಯದ ತಪ್ಪುಗಳನ್ನು ಎತ್ತಿ ತೋರಿಸುವುದಿಲ್ಲ” ಎಂದು ಅನಂತ್‌ಕುಮಾರ್ ಹೆಗಡೆ ಪತ್ರದಲ್ಲಿ ಬರೆದಿದ್ದಾರೆ.
ಅಲ್ಲದೇ ಕನ್ನಡದಲ್ಲೂ ಪೋಸ್ಟ್ ಮಾಡಿರುವ ಅನಂತ್ ಕುಮಾರ್ ಹೆಗಡೆ, ”ಪರಿಸರವಾದಿ, ಪ್ರಾಣಿಪ್ರೇಮಿ ಆಮೀರ್ ಖಾನ್ ಅಭಿನಯಿಸಿರುವ ಜಾಹೀರಾತು ಒಂದರಲ್ಲಿ ದೀಪಾವಳಿ ಹಬ್ಬದಲ್ಲಿ ಹಿಂದುಗಳಿಗೆ ಪಟಾಕಿ ಸಿಡಿಸದಂತೆ ಮನವಿಮಾಡಿದ್ದಾರೆ. ಅವರು ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಮೆಚ್ಚುಗೆ. ಅದರಂತೆ ಅನ್ಯಧರ್ಮಗಳಲ್ಲಿ (ತಾನು ಪ್ರತಿಪಾದಿಸುವ ಧರ್ಮವನ್ನು ಹಿಡಿದು) ನಡೆಯುವ ಎಷ್ಟೋ ಆಚರಣೆಗಳ ಬಗ್ಗೆ ಏಕೆ ಮೌನ?” ಎಂದು ಪ್ರಶ್ನಿಸಿದ್ದಾರೆ.
”ಪ್ರತಿದಿನ ಬೆಳಗ್ಗೆ ಚೀರುವ ಧ್ವನಿವರ್ಧಕಗಳು, ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳು ಅಮೀರ್ ಖಾನ್ ಗಮನ ಹರಿಸಿದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಅಂದಹಾಗೆ ಈ ರೀತಿಯ ಜಾಹೀರಾತುಗಳು ಹಿಂದುಗಳ ಭಾವನೆಗಳನ್ನು ತುಳಿಯಲು ಮಾಡಿದ ಕ್ಷುಲ್ಲಕ ಕುತಂತ್ರವಲ್ಲದೆ ಮತ್ತೇನೂ ಆಗಿರುವುದಿಲ್ಲ. ಅಂತೆಯೇ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ಅಭಿನೇತರರಿಗೇನು ಕಮ್ಮಿಯಿಲ್ಲ” ಎಂದು ಟೀಕಿಸಿದ್ದಾರೆ.
”ಈ ಜಾಹಿರಾತನ್ನು ಅನಂತ ವರಧಾನ್ ಗೋಯೆಂಕ ಮಾಲೀಕತ್ವದ ಸಿಯೆಟ್ ಸಂಸ್ಥೆಯು ಪ್ರಸ್ತುತ ಪಡೆಸಿದ್ದು, ಈ ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು ಹಾಗೂ ಹಿಂದೂಗಳೇ ಆಗಿರುವ ಅವರು ಹಿಂದುಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿ ಆಗ್ರಹ” ಎಂದಿದ್ದಾರೆ.