ನಟ ಅಮೀರ್ ಖಾನ್ ನಟನೆಯ ಪಿಕೆ ಸಿನಿಮಾದಲ್ಲಿ ಭಿಕ್ಷುಕನ ಪಾತ್ರ ಮಾಡಿದ ನಟನ ಬದುಕು ನಿಜಜೀವನದಲ್ಲಿ ಬದಲಾಗಿ ಹೋಗಿದೆ.
ಮನೋಜ್ ರಾಯ್ ಎಂಬಾತ ನಿಜ ಜೀವನದಲ್ಲಿ ಕೂಡ ಭಿಕ್ಷೆ ಬೇಡುತ್ತಿದ್ದ. ಆದರೆ, ಈಗ ಆತನ ಬದುಕೇ ಬದಲಾಗಿದೆ. ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ‘ಪಿಕೆ’ ಸಿನಿಮಾದಲ್ಲಿ ಕೇವಲ 5 ಸೆಕೆಂಡ್ ಕಾಣಿಸಿಕೊಳ್ಳುವ ಓರ್ವ ಭಿಕ್ಷುಕನ ಪಾತ್ರವಿತ್ತು. ಆ ಪಾತ್ರಕ್ಕೂ ಕೂಡ ಆಡಿಷನ್ ಮಾಡಲಾಗಿತ್ತು.
ಆಡಿಷನ್ ಪ್ರಕ್ರಿಯೆ ಮತ್ತು ಶೂಟಿಂಗ್ ಮುಗಿಯುವ ತನಕ ಉಚಿತವಾಗಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಮನೋಜ್ ರಾಯ್ ಅಲ್ಲಿಗೆ ತೆರಳಿದ್ದರು.
ತುಂಬ ಬಡ ಕುಟುಂಬದಿಂದ ಬಂದವರು ಮನೋಜ್ ರಾಯ್. ಬಾಲ್ಯದಲ್ಲೇ ಅವರು ತಾಯಿಯನ್ನು ಕಳೆದುಕೊಂಡರು. ತಂದೆ ದಿನಗೂಲಿ ಮಾಡಿ ಮಗನನ್ನು ಸಾಕಿದರು. ಆದರೆ ತಂದೆಯು ಅನಾರೋಗ್ಯಕ್ಕೆ ಒಳಗಾದ ಬಳಿಕ ಮನೋಜ್ ಅವರು ಶಾಲೆ ಬಿಟ್ಟು ಭಿಕ್ಷೆ ಬೇಡುತ್ತಿದ್ದರು. ಕೆಲಸ ಹುಡುಕಿಕೊಂಡು ದೆಹಲಿಗೆ ಬಂದ ಅವರಿಗೆ ಕೆಲಸ ಸಿಗಲಿಲ್ಲ. ಆಗ ಅವರು ದೆಹಲಿಯ ಬೀದಿಗಳಲ್ಲಿ ಭಿಕ್ಷೆ ಬೇಡಿದರು. ಆಗಲೇ ಅವರಿಗೆ ‘ಪಿಕೆ’ ಸಿನಿಮಾದ ಅವಕಾಶ ಸಿಕ್ಕಿತ್ತು.
5 ಸೆಕೆಂಡ್ನ ಪಾತ್ರ ಆಗಿದ್ದರೂ ಕೂಡ ಮನೋಜ್ ರಾಯ್ ಅವರು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಬಳಿಕ ಮನೋಜ್ ರಾಯ್ ಅವರಿಗೆ ಜನಪ್ರಿಯತೆ ಮತ್ತು ಒಂದಷ್ಟು ಹಣ ಸಿಕ್ಕಿತು. ಹಣವನ್ನು ತೆಗೆದುಕೊಂಡು ಅವರು ಊರಿಗೆ ಮರಳಿದ್ದಾರೆ. ಅಲ್ಲಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಈಗ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಈಗ ಅವರಿಗೆ ಗರ್ಲ್ ಫ್ರೆಂಡ್ ಕೂಡ ಇದ್ದಾರೆ.