ಓರ್ವ ವ್ಯಕ್ತಿ ಇಳಿಯ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಅವರ 62ನೇ ವಯಸ್ಸಿನಲ್ಲಿ ದೇವರು ಅವರಿಗೆ ತಂದೆಯ ಭಾಗ್ಯ ಕರುಣಿಸಿದ್ದಾನೆ. ಅದು ಒಂದಲ್ಲ. ಇವರಿಗೆ ಒಂದೇ ಬಾರಿಗೆ ಮೂವರು ಮಕ್ಕಳು.
ಇವರ 2ನೇ ಪತ್ನಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ, ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ ಎಂಬುವುದೇ ನೋವಿನ ಸಂಗತಿ. ಮಧ್ಯಪ್ರದೇಶದ ಸತನಾ ಜಿಲ್ಲೆಯಲ್ಲಿ ಈ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಉಚ್ಚೇಹ್ರಾ ಬ್ಲಾಕ್ ನ ತರ್ವೇಡಿಯಾ ಖುರ್ದ್ ಗ್ರಾಮದ ನಿವಾಸಿ ಗೋವಿಂದ್ ಕುಶ್ವಾಸ್ ಅವರ 2ನೇ ಪತ್ನಿ ಹೀರಾಬಾಯಿ ಕುಶ್ವಾಹ್ ದಂಪತಿ ಮಂಗಳವಾರ ಬೆಳಿಗ್ಗೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮಕ್ಕಳಿಲ್ಲದ ವೃದ್ಧ ಗೋವಿಂದ್ ಕುಶ್ವಾಹ್ ಅವರ ಮನೆಯಲ್ಲಿಯಲ್ಲಿ ಈಗ ಸಂತಸದ ವಾತಾವರಣ ಮೂಡಿದೆ. ಗೋವಿಂದ್ ಅವರು ಕಸ್ತೂರಿಬಾಯಿ ಎಂಬುವವರನ್ನು ಮೊದಲು ಮದುವೆಯಾಗಿದ್ದರು. ಅವರಿಗೆ ಗಂಡು ಮಗು ಜನಿಸಿತ್ತು. ಆದರೆ, 18 ವರ್ಷ ಆದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದ. ಹೀಗಾಗಿ ವಾರಸುದಾರನಿಲ್ಲದ ಕೊರಗು ಆ ಮನೆಯವರನ್ನು ಕಾಡುತ್ತಿತ್ತು. ಹೀಗಾಗಿ ಮೊದಲ ಪತ್ನಿ 2ನೇ ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾವವಿಟ್ಟಿದ್ದರು. ಅಲ್ಲದೇ, ಕುಟಂಬಸ್ಥರು ಕೂಡ ಒಪ್ಪಿಗೆ ಸೂಚಿಸಿದ್ದರು. 6 ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ಆದರೆ, ಮಕ್ಕಳ ಆರೋಗ್ಯ ಉತ್ತಮವಾಗಿಲ್ಲ ಎನ್ನಲಾಗುತ್ತಿದೆ. ಸದ್ಯ ಮಕ್ಕಳನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.








