ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮಗೆ ಅವಹೇಳನಕಾರಿ ಮತ್ತು ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ರಮ್ಯಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ಸುಪ್ರೀಂಕೋರ್ಟ್‌ನ ಆದೇಶವೊಂದನ್ನು ಹಂಚಿಕೊಂಡ ನಂತರ ತಮಗೆ ಬೆದರಿಕೆ ಕರೆಗಳು ಮತ್ತು ಅತ್ಯಂತ ಕೆಟ್ಟ ಸಂದೇಶಗಳು ಬರಲಾರಂಭಿಸಿವೆ ಎಂದು ಹೇಳಿದ್ದಾರೆ. “ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡಬೇಕಿತ್ತು. ನಿಮ್ಮನ್ನು ಅತ್ಯಾಚಾರ ಮಾಡುತ್ತೇವೆ” ಎಂಬಂತಹ ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳು ಬಂದಿವೆ ಎಂದು ರಮ್ಯಾ ಆತಂಕ ವ್ಯಕ್ತಪಡಿಸಿದರು.
ದೂರಿನ ಕುರಿತು ಪ್ರತಿಕ್ರಿಯಿಸಿದ ರಮ್ಯಾ, ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸೈಬರ್ ಕ್ರೈಂ ವಿಭಾಗಕ್ಕೆ ಫಾರ್ವರ್ಡ್ ಮಾಡುವುದಾಗಿ ತಿಳಿಸಿದ್ದಾರೆ. ಸುಮಾರು 43 ಕಮೆಂಟ್‌ಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಅವುಗಳಲ್ಲಿ ಬೆದರಿಕೆ ಹಾಗೂ ಅಶ್ಲೀಲ ಅಂಶಗಳಿವೆ. ಸಂದೇಶ ಕಳುಹಿಸಿದವರ ಹೆಸರುಗಳು ಕೂಡ ಲಭ್ಯವಿವೆ ಎಂದು ರಮ್ಯಾ ತಿಳಿಸಿದ್ದಾರೆ.
ಪವಿತ್ರಾ ಗೌಡ ಅವರ ಬಗ್ಗೆ ಮಾತನಾಡಿದರೆ ದರ್ಶನ್ ಅಭಿಮಾನಿಗಳಿಗೆ ಕೋಪ ಬರುತ್ತದೆ, ಆದರೆ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದರೆ ಕೋಪ ಬರಬೇಕಲ್ಲವೇ? ತಾವೂ ಮಹಿಳೆಯರೇ ಎಂದು ಪ್ರಶ್ನಿಸುವ ಮೂಲಕ ರಮ್ಯಾ ದರ್ಶನ್ ಅಭಿಮಾನಿಗಳ ವರ್ತನೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಕಿರುಕುಳ ಮತ್ತು ಮಹಿಳೆಯರ ಮೇಲಿನ ದಾಳಿಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸ ಒದಗಿಸಿದೆ.








