ಜವಾಬ್ದಾರಿಯ ಬ್ಯಾಟಿಂಗ್ ಹಾಗೂ ಚಾಣಾಕ್ಷ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ಸಂಘಟಿತ ಪ್ರದರ್ಶನದಿಂದ ಏಕದಿನ ವಿಶ್ವಕಪ್ನಲ್ಲಿ ತನ್ನ ಎರಡನೇ ಗೆಲುವಿನ ನಗೆಬೀರಿದೆ.
ದೆಹಲಿಯ ಅರುಣ್ಜೈಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಆಂಗ್ಲರಿಗೆ ಮಣ್ಣುಮುಕ್ಕಿಸಿದರು. ಭರ್ಜರಿ ಬ್ಯಾಟಿಂಗ್ನಿಂದ 284 ರನ್ ಕಲೆಹಾಕಿದ ಅಫ್ಘಾನಿಸ್ತಾನ, ಎದುರಾಳಿ ಇಂಗ್ಲೆಂಡ್ ತಂಡವನ್ನ 215 ರನ್ಗಳಿಗೆ ಕಟ್ಟಿಹಾಕಿ 69 ರನ್ಗಳ ಅದ್ಭುತ ಗೆಲುವು ಸಾಧಿಸಿತು. ಇದು ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತನ್ನ ಎರಡನೇ ಗೆಲುವಾಗಿದೆ.
ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ 2015ರ ಏಕದಿನ ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ ಅಫ್ಘಾನಿಸ್ತಾನ ತನ್ನ ಮೊದಲ ಗೆಲುವು ಕಂಡಿತ್ತು. ಇದಾದ ನಂತರ ವಿಶ್ವಕಪ್ನಲ್ಲಿ ಆಡಿದ್ದ ಪಂದ್ಯಗಳಲ್ಲಿ ಅಫ್ಘಾನ್ ತಂಡಕ್ಕೆ ಗೆಲುವು ಮರೀಚಿಕೆಯಾಗಿತ್ತು. ಆದರೆ 2023ರ ಏಕದಿನ ವಿಶ್ವಕಪ್ ಆರಂಭಕ್ಕೂ ಮೊದಲೇ ಬಲಿಷ್ಠ ತಂಡಗಳಿಗೆ ಟಕ್ಕರ್ ನೀಡುವ ನಿರೀಕ್ಷೆ ಮೂಡಿಸಿದ್ದ ಅಫ್ಘಾನಿಸ್ತಾನ, ಇದೀಗ ನಿರೀಕ್ಷೆಯಂತೆ ಇಂಗ್ಲೆಂಡ್ ತಂಡವನ್ನ ಜಯದ ಖಾತೆ ತೆರೆದು ಮಿಂಚಿದೆ.
ಸಿಡ್ನಿಯಲ್ಲಿ ನಡೆದ 2015ರ ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನವನ್ನ 9 ವಿಕೆಟ್ಗಳಿಂದ ಸೋಲಿಸಿದ್ದ ಇಂಗ್ಲೆಂಡ್, ನಂತರ ತವರಿನಲ್ಲಿ ನಡೆದ 2019ರ ವಿಶ್ವಕಪ್ ಟೂರ್ನಿಯಲ್ಲೂ 150 ರನ್ಗಳ ಭಾರೀ ಅಂತರದಿಂದ ಮಣಿಸಿತ್ತು. ಹೀಗಾಗಿ ಈ ಬಾರಿಯೂ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದ ಆಂಗ್ಲರಿಗೆ ಅಫ್ಘಾನ್ ಆಟಗಾರರು ದೊಡ್ಡ ಶಾಕ್ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಜಯದೊಂದಿಗೆ ವಿಶ್ವಕಪ್ನಲ್ಲಿ ಸತತ 14 ಪಂದ್ಯಗಳನ್ನ ಸೋತು ಕಂಗಾಲಾಗಿದ್ದ ಅಫ್ಘಾನಿಸ್ತಾನ ಕಡೆಗೂ ಜಯದ ನಗೆಬೀರಿದೆ.
ಇಂಗ್ಲೆಂಡ್ ವಿರುದ್ಧ ದೊರೆತ ಗೆಲುವಿನೊಂದಿಗೆ ಅಫ್ಘಾನಿಸ್ತಾನ, ವಿಶ್ವಕಪ್ ಟೂರ್ನಿಯ ತಮ್ಮ ಮುಂದಿನ ಎದುರಾಳಿ ತಂಡಗಳಿಗೆ ದೊಡ್ಡ ಎಚ್ಚರಿಕೆ ನೀಡಿದ್ದರೆ. ಇಂಗ್ಲೆಂಡ್ ತನ್ನ ಮುಂಬರುವ ಎಲ್ಲಾ ಪಂದ್ಯಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಆಡಬೇಕಾದ ಒತ್ತಡಕ್ಕೆ ಸಿಲುಕುವಂತಾಗಿದೆ.
AFG v ENG, England, Afghanistan, World Cup, ODI Cricket