Amit shah | ಅಮಿತ್ ಶಾಗೆ ಗಾಂಧೀಜಿಯವರಿಗಿಂತ ಸಾವರ್ಕರ್ ಪ್ರಿಯರಾಗಿರುವುದು ದುರಂತ
1 min read
Amit shah | ಅಮಿತ್ ಶಾಗೆ ಗಾಂಧೀಜಿಯವರಿಗಿಂತ ಸಾವರ್ಕರ್ ಪ್ರಿಯರಾಗಿರುವುದು ದುರಂತ
ಬೆಂಗಳೂರು : ಅಮಿತ್ ಶಾ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. ಗುಜರಾತಿನಿಂದ ಬಂದಿರುವ ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ ಮಾಡುತ್ತಿರುವುದು ವಿಷಾದನೀಯ.
ಅಮಿತ್ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ ಮಗನಾದ ಮಹಾತ್ಮ ಗಾಂಧೀಜಿ ಬಹು ಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಅಮಿತ್ ಶಾ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತ.
ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. amit-shah-siddaramaiah mahathma gandhi savarkar saaksha tv