ಏಕದಿನ ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯಗಳನ್ನ ಸೋತು ನೀರಸ ಆರಂಭ ಪಡೆದಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಇಂದು ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳ ನಡುವಿನ ಈ ಪಂದ್ಯಕ್ಕಾಗಿ ಲಕ್ನೋದ ಏಕನಾ ಮೈದಾನ ಸಜ್ಜಾಗಿದೆ.
ಏಕದಿನ ವಿಶ್ವಕಪ್ನಲ್ಲಿ ಐದು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮದೇ ಪ್ರಾಬಲ್ಯ ಹೊಂದಿರುವ ಆಸೀಸ್ ಪಡೆ ಈ ಬಾರಿಯ ವಿಶ್ವಕಪ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದ್ದ ಕಾಂಗರೂಗಳು, ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ದ ಕೂಡ ಸೋಲಿನ ಆಘಾತ ಕಂಡಿದೆ. ಹೀಗಾಗಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಆಸೀಸ್ ತಂಡಕ್ಕೆ ಲಂಕಾ ವಿರುದ್ಧದ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಪ್ಯಾಟ್ ಕಮ್ಮಿನ್ಸ್ ಸಾರಥ್ಯದಲ್ಲಿ ಕಣಕ್ಕಿಳಿದಿರುವ ಆಸೀಸ್, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಬಲಿಷ್ಠ ಆಟಗಾರರ ಪಡೆಯನ್ನೇ ಹೊಂದಿದ್ದರು ನಿರೀಸ ಪ್ರದರ್ಶನದಿಂದ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. ಟೂರ್ನಿಯ ಸೆಮೀಸ್ ಪ್ರವೇಶಿಸುವ ಅವಕಾಶ ಜೀವಂತ ಇರಬೇಕಾದರೆ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಒಂದೊಮ್ಮೆ ಲಂಕಾ ವಿರುದ್ಧದ ಈ ಪಂದ್ಯದಲ್ಲೂ ಕಾಂಗರೂಗಳಿಗೆ ಸೋಲು ಎದುರಾದಲ್ಲಿ, ಬಹುತೇಕ ಲೀಗ್ ಹಂತದಲ್ಲೇ ಹೊರಬೀಳಬೇಕಾಗುತ್ತದೆ ದುಸ್ಥಿತಿ ಎದುರಾಗಲಿದೆ. ಈ ಕಾರಣದಿಂದಾಗಿ ಆಸೀಸ್ ಆಟಗಾರರು ಕಳಪೆ ಪ್ರದರ್ಶನದಿಂದ ಹೊರ ಬರಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ.
ಲಂಕಾಗೂ ಗೆಲುವು ಅನಿವಾರ್ಯ:
ಆಸೀಸ್ ತಂಡಕ್ಕೆ ಸವಾಲು ನೀಡಲು ಸಜ್ಜಾಗಿರುವ ಶ್ರೀಲಂಕಾ ತಂಡದ ಸ್ಥಿತಿ ಕೂಡ ಇದೇ ರೀತಿಯಲ್ಲಿದೆ. ಟೂರ್ನಿಯಲ್ಲಿ ಸದ್ಯ ಆಡಿರುವ ಎರಡು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿರುವ ಲಂಕನ್ನರಿಗೂ ಗೆಲುವು ಅನಿವಾರ್ಯವಾಗಿದೆ. ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 102 ರನ್ಗಳ ಭಾರೀ ಅಂತರದ ಸೋಲು ಕಂಡಿದ್ದ ಶ್ರೀಲಂಕಾ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 6 ವಿಕೆಟ್ಗಳ ಸೋಲು ಕಂಡಿದೆ. ಹೀಗಾಗಿ ವಿಶ್ವಕಪ್ ಗೆಲ್ಲುವ ರೇಸ್ನಲ್ಲಿ ಜೀವಂತ ಇರಬೇಕಾದರೆ ಲಂಕಾ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿರುವ ಶ್ರೀಲಂಕಾ, ತನ್ನ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ. ತಂಡ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು, ಬೌಲಿಂಗ್ನಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಾಗಿಲ್ಲ. ತಂಡದ ಬ್ಯಾಟಿಂಗ್ನಲ್ಲಿ ಕುಸಲ್ ಮೆಂಡೀಸ್, ಪತುಮ್ ನಿಸ್ಸಾಂಕ, ಚರಿತ್ ಅಸಲಂಕ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಪ್ರಮುಖ ಬೌಲರ್ಗಳಾದ ಮಹೀಶ ತೀಕ್ಷಣ, ಮತೀಶ ಪತಿರಾಣ, ಕಸುನ್ ರಜಿತ ಅವರುಗಳಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಇದು ಶ್ರೀಲಂಕಾ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ನಡುವೆ ತಂಡದ ನಾಯಕ ದಸುನ್ ಶನಕ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ಸೋಲಿನ ಸುಳಿಗೆ ಸಿಲುಕಿರುವ ಲಂಕಾ ಪಡೆಗೆ ಮತ್ತೊಂದು ಆಘಾತ ನೀಡಿದೆ.
ತಂಡಗಳ ಮುಖಾಮುಖಿ:
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಈವರೆಗೆ 103 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 63 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ. ಶ್ರೀಲಂಕಾ 36 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. 4 ಪಂದ್ಯಗಳು ಯಾವುದೇ ಫಲಿತಾಂಶ ಕಂಡಿಲ್ಲ. ಇನ್ನೂ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಎರಡು ತಂಡಗಳು 10 ಪಂದ್ಯಗಳಲ್ಲಿ ಹಣಾಹಣಿ ನಡೆಸಿದ್ದು, 8 ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ. 1 ಬಾರಿ ಶ್ರೀಲಂಕಾ ಜಯ ಸಾಧಿಸಿದೆ. 1 ಪಂದ್ಯ ಫಲಿತಾಂಶ ಕಂಡಿಲ್ಲ.
ಸಂಭಾವ್ಯ ತಂಡಗಳು:
ಶ್ರೀಲಂಕಾ: ಕುಸಾಲ್ ಪೆರೇರಾ, ಪತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿಸಿಲ್ವ, ದುನಿತ್ ವೆಲ್ಲಲಗೆ, ದಿಲ್ಶನ್ ಮಧುಶಂಕ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ಮಥೀಶ ಪತಿರಣ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೋಯ್ನಿಸ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಶ್ ಹೇಜಲ್ವುಡ್.
AUS v SL, Australia, Sri Lanka, World Cup, ODI Cricket