ಢಾಕಾ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಡೀ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಹಿಂಸಾರೂಪ ತಾಳಿದೆ. ಬರೋಬ್ಬರಿ 10 ಲಕ್ಷ ವಿದ್ಯಾರ್ಥಿಗಳು ಢಾಕಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೇನೆಯೊಂದಿಗೆ ಕಿತ್ತಾಟದ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ (Bangladesh PM) ಹುದ್ದೆಗೆ ಶೇಖ್ ಹಸೀನಾ (Sheikh Hasina) ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಬಾಂಗ್ಲಾದಲ್ಲಿ ಈಗ ಮಿಲಿಟರಿ ಆಡಳಿತ ಆರಂಭವಾಗಿದೆ.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಅವರ ಕಚೇರಿಗೆ ನುಗ್ಗಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ. ಮನೆಗೆ ನುಗ್ಗುವ ಮೊದಲೇ ಶೇಖ್ ಹಸೀನಾ ರಾಜೀನಾಮೆ ನೀಡಿ ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಕೆಲ ಮಾಧ್ಯಮಗಳು ವಿಶೇಷ ವಿಮಾನದ ಮೂಲಕ ಭಾರತಕ್ಕೆ ತೆರಳಿ ಆಶ್ರಯ ಪಡೆದಿದ್ದಾರೆ ಎಂದು ವರದಿ ಮಾಡಿವೆ.
ಬಾಂಗ್ಲಾದೇಶದ (Bangladesh Clash) ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಇತ್ತೀಚೆಗಷ್ಟೇ 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭವಾಗಿದ್ದವು. ಸದ್ಯ ಆ ಪ್ರತಿಭಟನೆ ತೀವ್ರ ಹಿಂಸಾಚಾರ ರೂಪ ಪಡೆದು, ಪ್ರಧಾನಿ ರಾಜೀನಾಮೆ ನೀಡುವವರೆಗೂ ಬಂದು ನಿಂತಿದೆ.