ಬೆಂಗಳೂರಿನ ಹೊರವಲಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಆನೇಕಲ್ ತಾಲೂಕಿನ ಸರ್ಜಾಪುರ ಪ್ರದೇಶದಲ್ಲಿ ಚಡ್ಡಿಗ್ಯಾಂಗ್ ಪತ್ತೆಯಾಗಿದೆ. ಅ. 5ರಂದು ಚಡ್ಡಿಗ್ಯಾಂಗ್ ನಿಂದ ಕಳ್ಳತನವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೈಯಲ್ಲಿ ಆಯುಧಗಳನ್ನು ಗ್ಯಾಂಗ್ ಕಳ್ಳತನಕ್ಕೆ ಇಳಿದಿದೆ. ಐವರ ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರ್ಜಾಪುರ ರಸ್ತೆಯ ಅಪಾರ್ಟ್ ಮೆಂಟ್, ವಿಲ್ಲಾಗಳ ಬಳಿ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದೆ. ಬಿಲ್ಲಾಪುರ ಗ್ರಾಮದ ಕಾನ್ಪಿಡೆಂಟ್ ಬೆಲ್ಲಟಿಕ್ಸ್ ಲೇಔಟ್ ನಲ್ಲಿ ಚಿರಾಗ್ ಅಶೋಕ್ ಕುಮಾರ್ ಎಂಬುವವರ ಮನೆಯಲ್ಲಿ ಈ ಗ್ಯಾಂಕ್ ಕಳ್ಳತನ ಮಾಡಿದೆ ಎನ್ನಲಾಗಿದೆ.
ಮನೆಯ ಬೀಗ ಒಡೆದು ಮೂವತ್ತು ಸಾವಿರ ರೂ. ಕಳ್ಳತನ ಮಾಡಿದೆ. ಅಲ್ಲದೇ, ಬಿಲ್ಲಾಪುರ ಗ್ರಾಮದ ಇಂಡಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲೂ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ವಿಲ್ಲಾ ಮತ್ತು ಶಾಲೆಯ ಸಿಸಿಟಿವಿಗಳಲ್ಲಿ ಚಡ್ಡಿ ಗ್ಯಾಂಗ್ ಸೆರೆಯಾಗಿದೆ. ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಕಳ್ಳತನ ಮಾಡಿದ್ದಾರೆ. ಕೈಯಲ್ಲಿ ಹರಿತವಾದ ಆಯುಧಗಳನ್ನು ಹಿಡಿದುಕೊಂಡಿದ್ದಾರೆ. ಈ ಹಿಂದೆಯೂ ಕೆಲವು ಬಾರಿ ಈ ಗ್ಯಾಂಗ್ ಕಾಣಿಸಿಕೊಂಡಿದ್ದು, ಜನರು ಭಯದ ವಾತಾವರಣದಲ್ಲಿದ್ದಾರೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








