ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಮಂಡಿಸಿದ ನಿರ್ಣಯದ ವೇಳೆ ವಿಧಾನಸಭೆಯಲ್ಲಿ ನಡೆದ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಶಾಸಕರ ವಿರುದ್ಧ ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಶಾಸಕ ಶರಣು ಸಲಗರ ಅವರ ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಅವರು, ತಮ್ಮನ್ನು ವೈಯಕ್ತಿಕವಾಗಿ ನಿಂದಿಸಿದ್ದಕ್ಕೇ ತಾವು ರೊಚ್ಚಿಗೆಳಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಶರಣು ಸಲಗರ ಅವರ ಪತ್ನಿ (ತಹಶೀಲ್ದಾರ್) ಪ್ರಸ್ತಾವನೆ ಮಾಡಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ಶಿವಲಿಂಗೇಗೌಡರು, ನಾನು ಶರಣು ಸಲಗರ ಹಾಗೂ ವೇದವ್ಯಾಸ ಕಾಮತ್ ಅವರನ್ನುದ್ದೇಶಿಸಿ ಮಾತ್ರ ಮಾತನಾಡಿದ್ದೆ. ತಹಶೀಲ್ದಾರ್ ಆಗಿರುವ ಪತ್ನಿಯ ಪ್ರಭಾವದಿಂದಲೇ ಸಲಗರು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದರು. ಆ ಹಿನ್ನೆಲೆಯಲ್ಲಿ ನಾನು ಆ ಪ್ರಸ್ತಾವನೆ ಮಾಡಿದ್ದೆ. ಆದರೆ, ಹೆಣ್ಣುಮಕ್ಕಳ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಬಾಯಿಂದ ಹೆಣ್ಣುಮಕ್ಕಳ ಬಗ್ಗೆ ಅಪಗೌರವದ ಮಾತುಗಳು ಬರುವುದಿಲ್ಲ. ಆಕಸ್ಮಿಕವಾಗಿ ಬಂದ ಆ ಮಾತಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ನನ್ನನ್ನು ಕಳ್ಳ ಎಂದರೆ ನಾನು ಸುಮ್ಮನಿರಬೇಕಾ?
ಬಿಜೆಪಿ ಶಾಸಕರ ವಿರುದ್ಧ ಕೆಟ್ಟ ಪದಗಳನ್ನು ಬಳಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಲಿಂಗೇಗೌಡರು, ಸದನದಲ್ಲಿ ಬಿಜೆಪಿ ಶಾಸಕರು ವರ್ತಿಸಿದ ರೀತಿ ಸರಿಯಿರಲಿಲ್ಲ. ಅವರು ನನ್ನನ್ನು ಗುರಿಯಾಗಿಸಿಕೊಂಡು ಟಾರ್ಗೆಟ್ ಮಾಡಿದರು. ಸದನದಲ್ಲಿ ಥೈ ತಕ ಎಂದು ಕುಣಿಯುತ್ತಾ, ಮೈಕ್ ಇಲ್ಲದಿದ್ದರೂ ಬಾಯಿಗೆ ಬಂದಂತೆ ಕೂಗಾಡಿದರು. ನನ್ನನ್ನು ಕೊಬ್ಬರಿ ಕಳ್ಳ ಎಂದು ನಿಂದಿಸಿದರು. ನನ್ನನ್ನು ಕಳ್ಳ ಎಂದು ಕರೆದಾಗ, ಅವರಿಗೆ ದೇವರೇ, ಬುದ್ಧಿ, ಗುರುಗಳೇ ಎಂದು ಶಾಂತವಾಗಿ ಉತ್ತರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ನನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಅವರು ಪ್ರಚೋದನೆ ನೀಡಿದ್ದರಿಂದಲೇ ನಾನು ಆಕ್ರೋಶಗೊಂಡೆ. ನಿಮ್ಮಪ್ಪನಿಗೆ ಕೊಟ್ಟಿದ್ದೀನಿ ತೆಗೆದುಕೊ ಎಂದು ಹೇಳಿದ್ದು ನಿಜ. ಅದು ನನ್ನ ಮೇಲಿನ ವೈಯಕ್ತಿಕ ದಾಳಿಗೆ ಪ್ರತಿಕ್ರಿಯೆಯಾಗಿತ್ತು. ಇನ್ನು ನಾನು ಆರ್ಎಸ್ಎಸ್ ಸಂಘಟನೆಯ ಬಗ್ಗೆ ಮಾತನಾಡಿಲ್ಲ, ಆ ಸಂಘಟನೆಯ ಬಗ್ಗೆ ನನಗೆ ಗೌರವವಿದೆ. ಕೇವಲ ಆರೆಸ್ಸೆಸ್ನವನಾಗಿ ಯಾಕೆ ಹೀಗೆ ಕುಣಿಯುತ್ತೀಯಾ ಎಂದು ಕಾಮತ್ಗೆ ಪ್ರಶ್ನಿಸಿದ್ದೆ ಎಂದು ಗೌಡರು ಸಮರ್ಥಿಸಿಕೊಂಡಿದ್ದಾರೆ.
ಶಾಸಕ ಸ್ಥಾನದಿಂದ ವಜಾಗೊಳಿಸಲು ಜೆಡಿಎಸ್ ಆಗ್ರಹ
ಇನ್ನೊಂದೆಡೆ, ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ತೋರಿದ ವರ್ತನೆಗೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸ್ಪೀಕರ್ ಎದುರೇ ಪ್ರತಿಪಕ್ಷದ ಶಾಸಕರನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸುವುದು ಮತ್ತು ಗೂಂಡಾ ವರ್ತನೆ ಪ್ರದರ್ಶಿಸುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಜೆಡಿಎಸ್ ಕಿಡಿಕಾರಿದೆ.
ಒಬ್ಬ ಶಾಸಕನಾಗಿ ಸಂಸದೀಯ ಮೌಲ್ಯಗಳನ್ನು ಗಾಳಿಗೆ ತೂರಿರುವ ಶಿವಲಿಂಗೇಗೌಡರಿಗೆ ಶಾಸಕ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಅವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಹಾಗೂ ಮುಂದಿನ ಎಲ್ಲಾ ಅಧಿವೇಶನಗಳಿಂದ ಅಮಾನತುಗೊಳಿಸಿ ಸದನದ ಕಲಾಪಗಳಿಂದ ದೂರವಿಡಬೇಕು ಎಂದು ಜೆಡಿಎಸ್ ನಾಯಕರು ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಒತ್ತಾಯಿಸಿದ್ದಾರೆ.
ಸದನದ ಒಳಗಿನ ವಾಕ್ಸಮರ ಇದೀಗ ಸದನದ ಹೊರಗೂ ಮುಂದುವರಿದಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.








