ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಭಾರತೀಯ ಸೇನೆಯ ಮೇಲೆ ತನ್ನ ವಕ್ರ ದೃಷ್ಟಿ ಬೀರಿದೆ.
ಲೇಹ್‌ನಲ್ಲಿರುವ 34 ವರ್ಷದ ಭಾರತೀಯ ಸೈನಿಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೈನ್ಯದಲ್ಲಿ ಆತಂಕ ಹೆಚ್ಚಿಸಿದೆ. ಸೈನ್ಯದಲ್ಲಿ ಕೊರೊನಾ ಸೋಂಕು ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ಲೇಹ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧನಲ್ಲಿ ಕೊರೊನಾ ಲಕ್ಷಣಗಳಾದ ಕೆಮ್ಮು, ನೆಗಡಿ, ಸೀನು, ತಲೆ ನೋವು ಕಾಣಿಸಿಕೊಂಡಿದ್ದವು. ಕೂಡಲೇ ಯೋಧನನ್ನು ಆಸ್ಪತ್ರೆಗೆ ದಾಖಲಿಸಿ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ಸೈನಿಕ ಲೇಹ್‌ನ ಚುಚೋಟ್ ಗ್ರಾಮದ ನಿವಾಸಿ. ಸೈನಿಕನ ತಂದೆ ಫೆಬ್ರವರಿ 27 ರಂದು ಇರಾನ್ ನ ತೀರ್ಥ ಯಾತ್ರೆಯಿಂದ ಹಿಂತಿರುಗಿದ್ದರು. ಮಾರ್ಚ್ 6ರಂದು ಅವರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ನಂತರ ಅವರನ್ನು ಲೇಹ್‌ನ ಸೋನಮ್ ನರ್ಬೂ ಸ್ಮಾರಕ (ಎಸ್‌ಎನ್‌ಎಂ) ಆಸ್ಪತ್ರೆಗೆ ದಾಖಲಿಸಿ, ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ರಜಾದಿನದಲ್ಲಿದ್ದ ಯೋಧನಿಗೆ ತಂದೆಯಿಂದಲೇ ಕೊರೊನಾ ತಗುಲಿದರ ಬಗ್ಗೆ ವರದಿಯಾಗಿವೆ.
ಭಾರತದಲ್ಲಿ ಈಗಾಗಲೇ ಕೊರೊನಾದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. 142 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಸದ್ಯಕ್ಕೆ ಭಾರತವು ಕೊರೊನಾ ಎರಡನೇ ( ಅಂದರೆ ಸ್ಥಳೀಯ ಮಟ್ಟದ ವ್ಯಾಪಿಸುವಿಕೆ) ಹಂತದಲ್ಲಿದೆ. ಮಾಹಿತಿಗಳ ಪ್ರಕಾರ ಕೊರೋನಾ ಸೋಂಕು ಸ್ಥಳೀಯವಾಗಿ ಹಬ್ಬಿದೆಯೇ ವಿನಾ ಇನ್ನೂ ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ತಲುಪಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸ್ಪಷ್ಟಪಡಿಸಿದೆ.








