ಇಂದು ನಟ ದರ್ಶನ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಈ ವೇಳೆ 9 ಮುಂದಿನ ಸಿನಿಮಾಗಳ ಹೆಸರು ಘೋಷಿಸಲಾಗಿದೆ.
ದರ್ಶನ್ ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು ಸಂದಿರುವ ವೇಳೆ ಹಾಗೂ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ 9 ಸಿನಿಮಾಗಳನ್ನು ಘೋಷಿಸಿದ್ದಾರೆ. ಅಲ್ಲದೇ, ಈಗಷ್ಟೇ ಶೂಟಿಂಗ್ ಶುರುವಾಗಬೇಕಿರುವ ಡೆವಿಲ್ ಸಿನಿಮಾ ಹಿಡಿದರೆ ಡಿ ಬಾಸ್ ಹತ್ತಿರ ಈಗ 10 ಚಿತ್ರಗಳಿವೆ. ಡೆವಿಲ್ ಸಿನಿಮಾಕ್ಕೆ ಮಿಲನ ಚಿತ್ರ ನಿರ್ದೇಶಕ ಪ್ರಕಾಶ್ ಕ್ಯಾಪ್ ತೊಟ್ಟಿದ್ದಾರೆ. ಇನ್ನೆರಡು ಚಿತ್ರಗಳಿಗೆ ಕಾಟೇರ ಖ್ಯಾತಿಯ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ.
ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್ ಅವರಿಗಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ದರ್ಶನ್ ಸಿನಿಮಾಗಳಿಗೆ ಹಣ ಹಾಕಿದರೆ ಮೋಸ ಇಲ್ಲ ಎನ್ನುವ ಮಾತು ಆಗಿನಿಂದಲೂ ಇದೆ. ಕಾಟೇರ ಗೆದ್ದ ನಂತರ ಈ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕರು, ನಿರ್ದೇಶಕರು ದಚ್ಚುಗಾಗಿ ಕಾಯುತ್ತಿದ್ದಾರೆ.