ನಟಿ ರಮ್ಯಾ ನಿರ್ಮಾಣದ ಮೊದಲ ಚಿತ್ರ ಸಿನಿಮಾ ಶೂಟಿಂಗ್ ಮುಗಿಸಿ ವರ್ಷ ಕಳೆಯುತ್ತಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾದ ಶೂಟಿಂಗ್ ಮುಗಿದಿದೆ ಎನ್ನಲಾಗಿತ್ತು. ಆದರೆ, ಸಿನಿಮಾ ಬಿಡುಗಡೆಗೆ ಕಾಲ ಕೂಡಿ ಬಂದಿರಲಿಲ್ಲ. ಸದ್ಯ ಇದಕ್ಕೆ ಅಪ್ಡೇಟ್ ಸಿಕ್ಕಿದೆ.
ನವೆಂಬರ್ 24 ರಂದು ತಮ್ಮ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಹೀಗಾಗಿ ರಮ್ಯಾ ಅವರ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆಯಿದ್ದು, ತಡವಾಗಿ ರಿಲೀಸ್ ಮಾಡುತ್ತಿರುವುದಕ್ಕೆ ಬೇಸರವೂ ಇದೆ.
ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್ (Siri Ravikumar) ಹಾಗೂ ರಾಜ್ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ನಿರ್ದೇಶನದ ಜೊತೆಗೆ ನಟಿಸಿರುವ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಣೆ ಮಾಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ರಮ್ಯಾ (Ramya) ಅವರೇ ನಟಿಸಬೇಕಿತ್ತು. ಆದರೆ, ತಾವು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ, ಕೇವಲ ನಿರ್ಮಾಪಕಿಯಾಗಿ ಮಾತ್ರ ಇರುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.