ಮಣ್ಣಿನ ಮಗನ ಮಹಾಯಾನ : ದೊಡ್ಡ ಗೌಡರು ಪ್ರಧಾನಿಯಾದ ಗಳಿಗೆಗೆ ಬೆಳ್ಳಿ ಹಬ್ಬ
ರಾಜಕೀಯ ಹೇಗೆ ಇರಲಿ.. ಸಿದ್ದಾಂತ ಏನೇ ಇರಲಿ.. ಪಕ್ಷ ಯಾವುದೇ ಇರಲಿ.. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕನ್ನಡಿಗರ ಹೆಮ್ಮೆ..!
ಇಳಿವಯಸ್ಸಿನಲ್ಲೂ ಹೋರಾಟ ಎಂದರೇ ಚಿರಯುವಕನಂತೆ ಮುನ್ನುಗ್ಗುವ ಹೆಚ್ ಡಿ ದೇವೇಗೌಡ ಅವರು ಭಾರತ ಕಂಡ ಮುತ್ಸದ್ಧಿ ರಾಜಕಾರಣಿ. ಭಾರತದ ಪ್ರಧಾನಿ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗ, ಆ ಕ್ಷಣಕ್ಕೆ ಇಂದು ಬೆಳ್ಳಿ ಹಬ್ಬದ ಸಂಭ್ರಮ.
ಹೌದು..! ಕನ್ನಡ ನಾಡಿನ ಕುಗ್ರಾಮವೊಂದರಲ್ಲಿ ಸಾಮಾನ್ಯ ಒಕ್ಕಲುತನ ಕುಟುಂಬದ ಮಗನಾಗಿದ್ದ ಹೆಚ್ ಡಿ ದೇವೇಗೌಡರು ಭಾರತದ ಪ್ರಧಾನ ಮಂತ್ರಿಯಾದ ಸಂದರ್ಭಕ್ಕೆ ಇಂದು 25 ವರ್ಷಗಳು ತುಂಬಿವೆ. ಸಾಮಾನ್ಯ ರೈತನ ಮಗ ಹೋರಾಟಗಳಿಂದ ಪ್ರಧಾನಿ ಪಟ್ಟಕ್ಕೇರಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಸತ್ವ ಮತ್ತು ಸೌಂದರ್ಯ.
ದೇವೇಗೌಡರು ಪ್ರಧಾನಿಯಾಗಿದ್ದದ್ದು ಕೇವಲ 11 ತಿಂಗಳು ಮಾತ್ರ. ಆದ್ರೆ ನಾಡು ನುಡಿಗೆ ಬದ್ಧರಾಗಿ, ರೈತರು ಬಡವರ ಬದುಕು ಹಸನುಗೊಳಿಸಲು ಅವರು ನೀಡಿದ ಕೊಡುಗೆ ಅನನ್ಯ.
ಅವರ ಅಧಿಕಾರ ಅವಧಿಯಲ್ಲಿ ಕರ್ನಾಟಕ ಪ್ರತ್ಯೇಕ ರೈಲ್ವೆವಲಯ ಮತ್ತು ಹುಬ್ಬಳಿ ರೈಲ್ವೆ ವರ್ಕ್ ಶಾಪ್ ಗೆ ಕಾಯಕಲ್ಪ ನೀಡಲಾಯಿತು. 1000 ಕಿಲೋ ಮೀಟರ್ ರೈಲು ಮಾರ್ಗ ನಿರ್ಮಿಸಲಾಯಿತು. ಉತ್ತರ ಕರ್ನಾಟಕಕ್ಕೆ 17 ಹೊಸ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾದವು. ಭದ್ರವಾತಿ ಉಕ್ಕಿನ ಕಾರ್ಖಾನೆ. ಗ್ರಾಮೀಣಾಭಿವೃದ್ಧಿಗೆ ವಿಶೇಷ ಆಧ್ಯತೆ ಸೇರಿದಂತೆ ಹಲವಾರು ಅಭಿವೃಧ್ಧಿ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಅಲ್ವಾವಧಿ ಅಧಿಕಾರ ಅವಧಿಯಲ್ಲಿ ಸ್ವಾಭಿಮಾನದಿಂದ ಕನ್ನಡ ನಾಡಿನ ಘನತೆಗೆ ಚ್ಯುತಿ ಬರದಂತೆ ದಕ್ಷತೆಯಿಂದ ಕೆಲಸ ಮಾಡಿದ್ದಾರೆ.
ಹೆಚ್ ಡಿ ದೇವೇಗೌಡರು ಕರ್ನಾಟಕ ಕಂಡ ರಾಜಕಾರಣಿಗಳಲ್ಲಿ ವಿಶಿಷ್ಠ ವ್ಯಕ್ತಿತ್ವದವರು. ಅಪ್ಪಟ ಗ್ರಾಮೀಣ ಪರಿಸರದಿಂದ ಬೆಳೆದ ರೈತನ ಮಗ. ಒಕ್ಕಲುತನ ಮಾಡುತ್ತಲೇ ಓಡಾಡಿಕೊಂಡಿದ್ದ ದೇವೇಗೌಡರು 50ರ ದಶಕದಲ್ಲಿಯೇ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. 1962ರಲ್ಲಿ ವಿಧಾನಸಭೆ ಪ್ರವೇಶಿಸಿದ ಅವರು, ಅಂದಿನಿಂದ ಇಂದಿನವರೆಗೂ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಅವರ ರಾಜಕೀಯ ಬದುಕಿಗೆ ಸುವರ್ಣ ಸಂಭ್ರಮ.
ಜೂನ್ 1 1996 ಕನ್ನಡಿಗರ ಪಾಲಿಗೆ ಪುಳಕದ ದಿನ. ನರ್ಮದೆಯನ್ನು ದಾಟಿ ಹರ್ಷವರ್ಧನ ಮಹಾರಾಜನನ್ನು ಸೋಲಿಸಿದ ಕನ್ನಡಿಗರ ದೊರೆ ಇಮ್ಮಡಿ ಪುಲಿಕೇಶಿಯ ನಂತರ ದಕ್ಷಿಣ ಭಾರತದ ಗಡಿ ದಾಟಿ ದೆಹಲಿಯ ಕೆಂಪು ಕೋಟೆಯ ಮೇಲೆ ತಿರಂಗಾ ಹಾರಿಸಿದ ಏಕೈಕ ಕನ್ನಡಿಗ ಹೆಚ್ ಡಿ ದೇವೇಗೌಡರು.
ದೇಶ ಕಂಡ ಮಣ್ಣಿನ ಮಗ ಪ್ರಧಾನಿಯಾದ ಮಹಾ ಅಭಿಮಾನದ ಗಳಿಗೆಗೆ ಇಂದು ಬೆಳ್ಳಿ ಹಬ್ಬದ ಸಂಭ್ರಮವಾಗಿದೆ. ಅವರಿಗೆ ನಾಡಿನ ಸಮಸ್ತ ಜನತೆ ಪರದಾಗಿ ಅಭಿನಂದನೆಗಳು..