ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಭರ್ಜರಿ ಕಮಾಯ ಮಾಡಿ, ಸಿನಿ ರಸಿಕರ ಮನ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಭಾಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ಚಿತ್ರದ ಹೆಸರು ಬದಲಾಯಿಸಲಾಗಿದೆ ಎನ್ನಲಾಗುತ್ತಿದೆ. ಅದಕ್ಕೂ ಹೆಚ್ಚಾಗಿ ಈ ಚಿತ್ರ ರಜನಿ ಸಂಭಾವನೆಗೆ ಸದ್ದು ಮಾಡುತ್ತಿದೆ.
ನಿರ್ದೇಶಕ ನೆಲ್ಸನ್ ಮೊದಲ ಭಾಗ ನಿರ್ಮಾಣ ಮಾಡಿ, ಈಗ ‘ಜೈಲರ್ 2’ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಜನಿಕಾಂತ್ ಸಿನಿಮಾಗಳನ್ನು ಪ್ರೇಕ್ಷಕರು ಸಖತ್ ಇಷ್ಟಪಡುತ್ತಾರೆ. ಪಂಚ್ ಡೈಲಾಗ್ ಇದ್ದರೆ ಸಿನಿಮಾದ ತೂಕವಂತೂ ಹೇಳತೀರದು. ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಮಾಸ್ ಆಗಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಶಿವರಾಜ್ ಕುಮಾರ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರ ಗಮನ ಸೆಳೆದಿತ್ತು.
ಆದರೆ, ಈ ಬಾರಿ ‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಎಂಬ ಶೀರ್ಷಿಕೆ ನೀಡಲಾಗಿದೆ. ಜೂನ್ ತಿಂಗಳಲ್ಲಿ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಲಿವೆ ಎಂದು ವರದಿ ಆಗಿದೆ. ಸದ್ಯ ಸ್ಕ್ರಿಪ್ಟ್ನ ಡ್ರಾಫ್ಟ್ ರೆಡಿ ಆಗಿದ್ದು, ನೆಲ್ಸನ್ ಅವರ ಐಡಿಯಾ ಇಷ್ಟ ಆಗಿದೆ. ‘ಜೈಲರ್’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ವಿಲನ್ನ ಕೊಲೆ ಮಾಡಿ, ತಪ್ಪು ಮಾಡಿದ ಮಗನನ್ನೇ ಕೊಲ್ಲುವ ದೃಶ್ಯ ಇತ್ತು. ಈ ಕಥೆಯನ್ನು ಮುಂದುವರೆಸಲು ನಿರ್ದೇಶಕ ಮುಂದಾಗಿದ್ದಾರೆ.
ರಜನಿಕಾಂತ್ ನಟನೆಯ ‘ವೆಟ್ಟೈಯನ್’ ಸಿನಿಮಾ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ. ಆನಂತರ ‘ಥಲೈವರ್ 171’ ಸಿನಿಮಾದಲ್ಲಿ ರಜನಿಕಾಂತ್ ನಟಿಸಲಿದ್ದಾರೆ. ಇದಾದ ಬಳಿಕ ‘ಜೈಲರ್ 2’ ಸಿನಿಮಾ ಸೆಟ್ಟೇರಲಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಚಿತ್ರಕ್ಕೆ 250 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ವಿಚಾರ ನಿಜವಾಗಿದ್ದರೆ, ಏಷ್ಯಾದಲ್ಲೇ ಅತಿ ದೊಡ್ಡ ಸಂಭಾವನೆ ಪಡೆದ ನಾಯಕ ನಟ ಎಂಬ ಖ್ಯಾತಿಗೆ ರಜನಿ ಪಾತ್ರರಾಗಲಿದ್ದಾರೆ.