ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ಡಾಲಿ ಧನಂಜಯ ಆಯ್ಕೆಯಾಗಿದ್ದಾರೆ.
ಈ ಕುರಿತು ಸರ್ಕಾರ ಘೋಷಿಸಿದೆ. ಈ ವಿಷಯ ಅವರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಸಹಜವಾಗಿಯೇ ಖುಷಿ ತಂದಿದೆ. 15ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಫೆಬ್ರವರಿ 29ರಂದು ವಿಧಾನಸೌಧದ ಮುಂಭಾಗ ನಡೆಯುವ ಕಾರ್ಯಕ್ರಮದ ಮೂಲಕ ಉದ್ಘಾಟನೆಯಾಗಲಿದ್ದು, ಈ ಕಾರ್ಯಕ್ರಮ ಮಾ. 7ರ ವರೆಗೆ ನಡೆಯಲಿದೆ.
ಈ ಬಾರಿ 50ಕ್ಕೂ ಅಧಿಕ ರಾಷ್ಟ್ರಗಳಿಂದ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದ ಸಿನಿಮಾಗಳೂ ಸೇರಿದಂತೆ 200ಕ್ಕೂ ಅಧಿಕ ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದ ಚಲನಚಿತ್ರಗಳು ಕೂಡ ಭಾಗವಹಿಸುತ್ತಿವೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತರು, ಕಾನ್ (ಫ್ರಾನ್ಸ್), ಬರ್ಲಿನ್(ಜರ್ಮನಿ), ಕಾರ್ಲೋ ವಿವಾರಿ(ಜೆಕ್‌ರಿಪಬ್ಲಿಕ್. ಲೊಕಾರ್ನೊ (ಸ್ವಿಟ್ಸರ್ಲೆಂಡ್), ರಾಟರ್‌ಡ್ಯಾಮ್ (ನೆದಲ್ಯಾಂಡ್), ಬೂಸಾನ್ (ದಕ್ಷಿಣ ಕೊರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಅಭಿಮಾನಿಗಳಿಗೆ ಸಿಗಲಿವೆ.
ಏಷಿಯನ್ ಸ್ಪರ್ಧಾ ವಿಭಾಗ, ಚಿತ್ರಭಾರತಿ-ಭಾರತೀಯ, ಕನ್ನಡ ಸಿನಿಮಾ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ವಿಮರ್ಶಕರ ವಾರ: ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ (ಫಿಪ್ರಸಿ) ಆಯ್ಕೆ ಮಾಡಿದ ಏಳು ವಿಶೇಷ ಸಮಕಾಲೀನ ಚಲನಚಿತ್ರಗಳ ಪ್ರದರ್ಶನ, ಜೀವನಾಧಾರಿತ ಚಿತ್ರಗಳು, ದೇಶ ಕೇಂದ್ರಿತ: ಜರ್ಮನಿಯ ಚಲನಚಿತ್ರಗಳ ವಿಶೇಷ ಪ್ರದರ್ಶನ, ಮಹಿಳಾ ಶಕ್ತಿ- ಮಹಿಳಾ ನಿರ್ದೇಶಕರ ಚಿತ್ರಗಳ ಪ್ರದರ್ಶನ ನಡೆಯಲಿವೆ. ಕನ್ನಡ ಚಲನಚಿತ್ರರಂಗಕ್ಕೆ 90 ವರ್ಷ ತುಂಬಲಿದ್ದು, ಈ ಸಂಭ್ರಮಾಚರಣೆಯನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಚರಿಸಲಾಗುತ್ತಿದೆ.