ರಾಯ್ಪುರ : ಉಡುಗೊರೆಯಾಗಿ ಮದುವೆಯಲ್ಲಿ (Wedding Gift) ನೀಡಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ (Music System) ಸ್ಫೋಟಗೊಂಡ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಛತ್ತೀಸ್ಗಢದ (Chhattisgarh) ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ನವ ವಿವಾಹಿತ ಹಾಗೂ ಆತನ ಸಹೋದರ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮೃತ ನವವಿವಾಹಿತ ವ್ಯಕ್ತಿ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು ಎನ್ನಲಾಗಿದೆ. ಹೀಗೆ ಬಂದ ಉಡುಗೊರೆಗಳಲ್ಲಿ ಹೋಮ್ ಥಿಯೇಟರ್ ಕೂಡ ಇದೆ. ಅದರ ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್ ಗೆ ಜೋಡಿಸಿ ನಂತರ ಅದನ್ನು ಆನ್ ಮಾಡಿದಾಗ ಅದು ಸ್ಫೋಟಗೊಂಡಿದೆ ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ವಿಧಿವಿಜ್ಞಾನ ತಜ್ಞರೊಂದಿಗೆ ಪೊಲೀಸ್ ತಂಡ ತೆರಳಿದೆ. ಕೊಠಡಿಯನ್ನು ಪರಿಶೀಲಿಸಿದಾಗ ಸ್ಫೋಟಕ್ಕೆ ಕಾರಣವಾಗಿರುವ ಯಾವುದೇ ವಸ್ತು ಪತ್ತೆಯಾಗಿಲ್ಲ. ಮ್ಯೂಸಿಕ್ ಸಿಸ್ಟಮ್ ಮಾತ್ರವೇ ಕೋಣೆಯಲ್ಲಿ ಸ್ಫೋಟಗೊಂಡಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎದು ರೆಂಗಾಖರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದುರ್ಗೇಶ್ ರಾವ್ಟೆ ತಿಳಿಸಿದ್ದಾರೆ.








