ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಲಯ ಕಂಡುಕೊಂಡಿದ್ದು, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿದ್ದಾರೆ.
ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಅರ್ಧಶತಕ ಸಿಡಿಸಿದ್ದ ಕೊಹ್ಲಿ, ಪಾಕಿಸ್ತಾನದ ವಿರುದ್ಧ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದರು. ಆದರೆ ಇದೀಗ ಅ.19ರಂದು ನಡೆಯುವ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಭರ್ಜರಿ ತಯಾರಿ ಮಾಡಿಕೊಂಡಿದ್ದು, ದೊಡ್ಡ ಇನ್ನಿಂಗ್ಸ್ ಕಟ್ಟುವ ಭರವಸೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.
ವಿಶ್ವದ ಎಲ್ಲಾ ತಂಡಗಳ ವಿರುದ್ಧವೂ ಅತ್ಯುತ್ತಮ ದಾಖಲೆ ಹೊಂದಿರುವ ಕಿಂಗ್ ಕೊಹ್ಲಿ, ಬಾಂಗ್ಲಾ ತಂಡದ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿ ಪ್ರಾಬಲ್ಯ ಸಾಧಿಸಿದ್ದಾರೆ. ಶಕೀಬ್-ಅಲ್-ಹಸನ್ ಸಾರಥ್ಯದ ಬಾಂಗ್ಲಾದೇಶ ತಂಡದ ವಿರುದ್ಧ ಈವರೆಗೂ 15 ಏಕದಿನ ಪಂದ್ಯಗಳನ್ನ ಆಡಿರುವ ಕಿಂಗ್ ಕೊಹ್ಲಿ, 67.25ರ ಸರಾಸರಿಯಲ್ಲಿ 807 ರನ್‌ಗಳಿಸಿದ್ದಾರೆ.
ಇನ್ನೂ ಏಕದಿನ ವಿಶ್ವಕಪ್‌ನಲ್ಲೂ ಬಾಂಗ್ಲಾ ಹುಲಿಗಳ ವಿರುದ್ಧ ಚೇಸ್ ಮಾಸ್ಟರ್ ಕೊಹ್ಲಿ ಪ್ರಾಬಲ್ಯ ಮರೆದಿದ್ದಾರೆ. ಆಡಿರುವ 3 ಪಂದ್ಯಗಳಲ್ಲಿ 129 ರನ್‌ಗಳಿಸಿದ್ದಾರೆ. 2011ರ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಆಡಿದ್ದ ಕೊಹ್ಲಿ ಅತ್ಯಾಕರ್ಷಕ ಶತಕ ದಾಖಲಿಸಿ ಮಿಂಚಿದ್ದರು. ಆದರೆ 2015 ಹಾಗೂ 2019ರ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಕೊಹ್ಲಿ, ಇದೀಗ ನಾಲ್ಕನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನ ಎದುರಿಸಲು ಸಜ್ಜಾಗಿದ್ದಾರೆ.
IND v BAN, Virat Kohli, World Cup, ODI Cricket, Team India