ಬೆಂಗಳೂರು: ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ್ದ ಸಂಗತಿ ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿತ್ತು. ಆತ ಒಬ್ಬನೇ ಅಲ್ಲ, ಮತ್ತಿಬ್ಬರು ಐಸಿಸ್ ಶಂಕಿತ ಉಗ್ರರನ್ನು ಎನ್‍ಐಎ ಖೆಡ್ಡಾಕ್ಕೆ ಕೆಡವಿದೆ.
ಬೆಂಗಳೂರು ನಗರ ಐಸಿಸ್ ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆ ಎಂಬ ಮಾಹಿತಿ ಹಲವು ತಿಂಗಳಿಂದ ಗುಪ್ತಚರ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ವೈದ್ಯ ಅಬ್ದುರ್ ರೆಹಮಾನ್, ಮೆಡಿಕಲ್ ಕೋರ್ಸ್ ಮಾಡುತ್ತಲೇ ನಗರದಲ್ಲಿ ಐಸಿಸ್ ನೆಲೆ ಗಟ್ಟಿಗೊಳಿಸುವ ಪ್ರಯತ್ನ ನಡೆಸಿದ್ದ.
ಈತ ನೀಡಿದ ಸುಳಿವಿನ ಆಧರಿಸಿ ಬೇಟೆಗೆ ಇಳಿದ ರಾಷ್ಟ್ರೀಯ ತನಿಖಾ ದಳದ ತಂಡ, ಬೆಂಗಳೂರಿನ ಗುರಪ್ಪನಪಾಳ್ಯ ಹಾಗೂ ಫ್ರೇಜರ್‍ಟೌನ್‍ನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದೆ.

ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಇರ್ಪಾನ್ ನಾಸಿರ್ ಸತ್ತಾರ್, ತಮಿಳುನಾಡಿನ ರಾಮನಾಥಪುರದ ಅಹಮ್ಮದ್ ಅಬ್ದುಲ್ ಖಾದರ್ ಬಂಧಿತ ಆರೋಪಿಗಳು.
ಇರ್ಫಾನ್ ಅಕ್ಕಿ ವ್ಯಾಪಾರಿ ಆಗಿದ್ದರೆ, ಅಬ್ದುಲ್ ಖಾದರ್ ಚೆನ್ನೈನ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ಶಂಕಿತ ಉಗ್ರರು ಬಾಂಬ್ ಸ್ಫೋಟಗಳ ಮೂಲಕ ದೇಶದಲ್ಲಿ ವಿಧ್ವಂಸಕ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು. ಇಬ್ಬರ ಮನೆಯಲ್ಲೂ ಸ್ಫೋಟಕದ ವಸ್ತುಗಳು, ಎಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್‍ಐಎ ಮಾಹಿತಿ ನೀಡಿದೆ.

2013-14ರಲ್ಲಿ ಸಿರಿಯಾಗೆ ಹೋಗಿದ್ದ ಶಂಕಿತರು, ಕುರಾನ್ ಸರ್ಕಲ್ ಎಂಬ ಗುಂಪು ಕಟ್ಟಿಕೊಂಡಿದ್ದರು. ಈ ಗುಂಪಿನ ಮೂಲಕವೇ ಸ್ಫೋಟಕ್ಕೆ ಸ್ಕೆಚ್ ಹಾಕುತ್ತಿದ್ದರು. ಸಿಎಎ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆದ ಉಗ್ರ ಪ್ರತಿಭಟನೆಗಳ ವೇಳೆ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿ ವಿಫಲರಾಗಿದ್ದರು. ಮುಸ್ಲಿಂ ಯುವಕರಿಗೆ ಹಣದ ಆಮಿಷವೊಡ್ಡಿ ಐಸಿಸ್ ಸೇರಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿರುವ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.








