ಬೆಂಗಳೂರು: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ‘ಜಾವಾ ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್ಸ್’ ಅಂತಾರಾಷ್ಟ್ರೀಯ ಇಐಸಿಎಂಎ ಮೇಳದಲ್ಲಿ ಸತತ ಮೂರನೇ ಬಾರಿಗೆ ಭಾಗವಹಿಸಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿದೆ. ಈ ಮೇಳದಲ್ಲಿ ಸಂಸ್ಥೆಯು ಬಿಎಸ್‌ಎ ಬ್ರ್ಯಾಂಡ್‌ನ ‘ಬಾಂಟಮ್ ಬಾಬ್ಬರ್ 350’ ಮತ್ತು ‘ಬಾಂಟಮ್ ಸ್ಕ್ರ್ಯಾಂಬ್ಲರ್ 350’ ಎಂಬ ಎರಡು ಹೊಸ ಬೈಕ್‌ಗಳನ್ನು ಜಾಗತಿಕವಾಗಿ ಮೊದಲ ಬಾರಿಗೆ ಅನಾವರಣಗೊಳಿಸಿದೆ.
ಜೊತೆಗೆ ಉತ್ಪಾದನೆಗೆ ಸಿದ್ಧವಾಗಿರುವ ‘ಥಂಡರ್‌ಬೋಲ್ಟ್ 350’ ಅಡ್ವೆಂಚರ್ ಬೈಕ್ ಹಾಗೂ ಸ್ಕ್ರ್ಯಾಂಬ್ಲರ್ 650, ಗೋಲ್ಡ್ ಸ್ಟಾರ್ 650, ಬಾಂಟಮ್ 350 (1948ರ ಮಾಡೆಲ್ ಪ್ರೇರಿತ ಮಿಸ್ಟ್ ಗ್ರೀನ್ ಸೇರಿ) ಮತ್ತು ಥಂಡರ್‌ಬೋಲ್ಟ್ 350 ಮಾದರಿಗಳನ್ನು ಆಕರ್ಷಕ ಹೊಸ ಬಣ್ಣಗಳಲ್ಲೂ ಪ್ರದರ್ಶಿಸಿದೆ.
ಬಾಬ್ಬರ್ ಮತ್ತು ಸ್ಕ್ರ್ಯಾಂಬ್ಲರ್ ಬೈಕ್‌ಗಳ ವಿಶೇಷತೆಗಳೇನು?
ಭಾರತದಲ್ಲೇ ಅಭಿವೃದ್ಧಿಪಡಿಸಲಾದ 334 ಸಿಸಿ ಲಿಕ್ವಿಡ್-ಕೂಲ್ಡ್ ಡಿಒಎಚ್‌ಸಿ ಎಂಜಿನ್ ಹಾಗೂ ಡ್ಯುಯಲ್-ಚಾನೆಲ್ ಎಬಿಎಸ್ ಸೌಲಭ್ಯವನ್ನು ಈ ಹೊಸ ಬಾಬ್ಬರ್ 350 ಮತ್ತು ಸ್ಕ್ರ್ಯಾಂಬ್ಲರ್ 350 ಬೈಕ್‌ಗಳು ಹೊಂದಿವೆ.
‘ಬಾಬ್ಬರ್ 350’ ಸಿಂಗಲ್-ಸೀಟ್ ವಿನ್ಯಾಸ ಹೊಂದಿದ್ದರೆ, ‘ಬಾಬರ್ 350 ಎಸ್‌ಪಿ’ ಆವೃತ್ತಿಯು ಗೋಲ್ಡ್-ಫಿನಿಶ್ಡ್ ಯುಎಸ್‌ಡಿ ಫ್ರಂಟ್ ಫೋರ್ಕ್ಸ್ ಮತ್ತು ಫುಲ್-ಕಲರ್ ಟಿಎಫ್‌ಟಿ ಡಿಸ್‌ಪ್ಲೇ ಒಳಗೊಂಡಿದೆ.
1966ರ ಬಿಎಸ್‌ಎ ಬುಷ್‌ಮ್ಯಾನ್ ಮಾದರಿಯಿಂದ ಪ್ರೇರಿತವಾದ ಸ್ಕ್ರ್ಯಾಂಬ್ಲರ್ 350 ಬೈಕ್, ಸ್ಪೋಕ್ ವೀಲ್ ಮತ್ತು ಸೆಮಿ-ನಾಬಿ ಟೈರ್‌ಗಳನ್ನು ಹೊಂದಿದ್ದು, ನಗರ ಮತ್ತು ಸಾಹಸಮಯ ಪ್ರಯಾಣಕ್ಕೆ ಹೇಳಿಮಾಡಿಸಿದಂತಿದೆ.
ಮಾರುಕಟ್ಟೆಗೆ ಬರಲು ಸಜ್ಜಾಗಿದೆ ಥಂಡರ್‌ಬೋಲ್ಟ್ 350
ಇನ್ನು ಕಳೆದ ವರ್ಷ ಪ್ರದರ್ಶಿಸಲಾಗಿದ್ದ ಬಿಎಸ್‌ಎಯ ಮೊದಲ ಅಡ್ವೆಂಚರ್ ಬೈಕ್ ‘ಥಂಡರ್‌ಬೋಲ್ಟ್ 350’ ಈಗ ಮಾರುಕಟ್ಟೆಗೆ ಬರಲು ಸಿದ್ಧವಾಗಿದ್ದು, ಟ್ರ್ಯಾಕ್ಷನ್ ಕಂಟ್ರೋಲ್, 3 ಎಬಿಎಸ್ ಮೋಡ್‌ಗಳು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಹಾಗೂ ಯುಎಸ್‌ಬಿ ಚಾರ್ಜಿಂಗ್‌ನಂತಹ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ.
ಭಾರತದಲ್ಲಿ ಯೆಜ್ಡಿ ಬೈಕ್‌ಗಳು ದೇಶೀಯವಾಗಿ ಅಭಿವೃದ್ಧಿಪಡಿಸಿದ ಆಲ್ಫಾ 2 ಮತ್ತು ಕಟಾರ್ ಎಂಜಿನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದರೆ, ಜಾವಾ ಆಲ್ ಸ್ಟಾರ್ಸ್ ಶ್ರೇಣಿಯು ಯುವ ಸವಾರರನ್ನು ಸೆಳೆಯುತ್ತಿದೆ.
1861ರಲ್ಲಿ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಹುಟ್ಟಿದ ಐತಿಹಾಸಿಕ ಬಿಎಸ್‌ಎ ಬ್ರ್ಯಾಂಡ್, ಈಗ ಭಾರತದಲ್ಲಿ ತಯಾರಾದ ಬೈಕ್‌ಗಳ ಮೂಲಕವೇ ತನ್ನ ತವರು ನೆಲವಾದ ಯುಕೆ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. 2025ರಲ್ಲಿ ಬಿಡುಗಡೆಯಾದ ಭಾರತ ನಿರ್ಮಿತ ‘ಬಿಎಸ್‌ಎ ಬಾಂಟಮ್ 350’, ಯುಕೆಯ ಮಾಸಿಕ ಮಾಡರ್ನ್-ಕ್ಲಾಸಿಕ್ ಬೈಕ್ ಮಾರಾಟ ಪಟ್ಟಿಯಲ್ಲಿ ಸತತವಾಗಿ ಅಗ್ರಸ್ಥಾನ ಪಡೆದಿದೆ.
ಈ ಕುರಿತು ಸಂತಸ ಹಂಚಿಕೊಂಡ ಕ್ಲಾಸಿಕ್ ಲೆಜೆಂಡ್ಸ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ನಾವು ಭಾರತದಿಂದ ಜಾಗತಿಕ ಮೋಟಾರ್‌ಸೈಕಲ್ ಕಂಪನಿಯನ್ನು ಕಟ್ಟುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ದೊಡ್ಡ ಎಂಜಿನ್ ಬೈಕ್‌ಗಳಿಗೆ ಮಾತ್ರ ಬೇಡಿಕೆ ಇದೆ ಎಂಬ ನಂಬಿಕೆಯನ್ನು ಬಾಂಟಮ್ 350 ಸುಳ್ಳಾಗಿಸಿದೆ. ಈಗ ಬಾಬರ್ ಮತ್ತು ಸ್ಕ್ರ್ಯಾಂಬ್ಲರ್ ಮೂಲಕ ಬಿಎಸ್‌ಎ ಕುಟುಂಬವನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ,” ಎಂದರು.
ಮಾರಾಟದ ಅಂಕಿಅಂಶಗಳಲ್ಲೂ ಸಂಸ್ಥೆ ಗಮನಾರ್ಹ ಪ್ರಗತಿ ಸಾಧಿಸಿದೆ. 2025ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 32,482 ಬೈಕ್‌ಗಳನ್ನು ಮಾರಾಟ ಮಾಡಿದ್ದ ಕಂಪನಿಯು, 2026ನೇ ಆರ್ಥಿಕ ವರ್ಷದಲ್ಲಿ 45,409 ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ. 40ರಷ್ಟು ಬೆಳವಣಿಗೆ ಕಂಡಿದೆ. ಅಂತಾರಾಷ್ಟ್ರೀಯ ಮಾರಾಟವನ್ನೂ ಸೇರಿಸಿದರೆ ಒಟ್ಟಾರೆ ವ್ಯವಹಾರದಲ್ಲಿ ಶೇ. 55ರಷ್ಟು ಭರ್ಜರಿ ಏರಿಕೆಯಾಗಿದೆ. ಈ ಬೇಡಿಕೆಯನ್ನು ಪೂರೈಸಲು 2026ರ ಅಂತ್ಯದ ವೇಳೆಗೆ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 1.20 ಲಕ್ಷದಿಂದ 2 ಲಕ್ಷಕ್ಕೂ ಹೆಚ್ಚು ಬೈಕ್‌ಗಳಿಗೆ ಏರಿಸಲು ಕಂಪನಿ ಶ್ರಮಿಸುತ್ತಿದೆ.
ಜೊತೆಗೆ ಸಿಕೆಡಿ ಘಟಕಗಳ ಮೂಲಕ ವಿದೇಶಿ ವಿಸ್ತರಣೆಗೂ ಚಿಂತನೆ ನಡೆಸಿದ್ದು, ದೇಶದಲ್ಲಿ ಸದ್ಯ ಇರುವ 450ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಕೇಂದ್ರಗಳನ್ನು 2028ನೇ ಆರ್ಥಿಕ ವರ್ಷದ ವೇಳೆಗೆ ದ್ವಿತೀಯ ಹಾಗೂ ತೃತೀಯ ದರ್ಜೆ ನಗರಗಳು ಸೇರಿದಂತೆ 700ಕ್ಕೂ ಅಧಿಕ ಕೇಂದ್ರಗಳಿಗೆ ವಿಸ್ತರಿಸುವ ಗುರಿ ಹೊಂದಿದೆ.
ಗ್ರಾಹಕರ ಅನುಭವವನ್ನು ಉತ್ತಮಪಡಿಸಲು ಸಂಸ್ಥೆಯು 2026ರ ಹಬ್ಬದ ಸೀಸನ್‌ನಲ್ಲಿ ಹಲವು ಗ್ರಾಹಕ-ಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಡೀಲರ್‌ಶಿಪ್‌ಗಳ ಹೊರತಾಗಿಯೂ ಅಧಿಕೃತ ವಿತರಕರ ಮೂಲಕ ಅಸಲಿ ಬಿಡಿಭಾಗಗಳು ಸ್ಥಳೀಯ ವರ್ಕ್‌ಶಾಪ್‌ಗಳು ಮತ್ತು ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಜಾಲವನ್ನು ವಿಸ್ತರಿಸಲಾಗಿದೆ.
ಇದರ ಜೊತೆಗೆ ‘ಓನರ್‌ಶಿಪ್ ಅಶ್ಯೂರೆನ್ಸ್’ ಕಾರ್ಯಕ್ರಮದಡಿ 4 ವರ್ಷ ಅಥವಾ 50,000 ಕಿ.ಮೀ. ಸ್ಟ್ಯಾಂಡರ್ಡ್ ವಾರಂಟಿ (6 ವರ್ಷ/74,000 ಕಿ.ಮೀ.ವರೆಗೆ ವಿಸ್ತರಿಸಬಹುದು), 8 ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟೆನ್ಸ್, 5 ವರ್ಷಗಳ ನಿರ್ವಹಣಾ ಯೋಜನೆಗಳು ಹಾಗೂ ಸುಲಭ ಹಣಕಾಸು (ಫೈನಾನ್ಸ್) ಸೌಲಭ್ಯಗಳನ್ನು ನೀಡುವ ಮೂಲಕ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.








