ಬೆಂಗಳೂರು: ಕಾಲೇಜು ಕ್ಯಾಂಪಸ್ಗಳೆಂದರೆ ಕೇವಲ ಜಂಕ್ ಫುಡ್ಗಳೇ ನೆನಪಾಗುತ್ತಿದ್ದ ಕಾಲವೊಂದಿತ್ತು. ಆದರೆ ಈಗ ವಿದ್ಯಾರ್ಥಿಗಳು ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರದತ್ತ ಮುಖ ಮಾಡಿದ್ದಾರೆ. ಆನ್ಲೈನ್ ಫುಡ್ ಡೆಲಿವರಿ ವೇದಿಕೆಯಾದ ಸ್ವಿಗ್ಗಿಯ ‘ಈಟ್ರೈಟ್’ ವಿಭಾಗಕ್ಕೆ ಕಾಲೇಜು ಕ್ಯಾಂಪಸ್ಗಳಿಂದ ಬರುವ ಆರ್ಡರ್ಗಳಲ್ಲಿ ವಾರ್ಷಿಕವಾಗಿ ಶೇ. 40ಕ್ಕೂ ಹೆಚ್ಚು ಬೆಳವಣಿಗೆ ದಾಖಲಾಗಿರುವುದೇ ಇದಕ್ಕೆ ಸಾಕ್ಷಿ.
ಈಟ್ರೈಟ್ನ ಹೈ-ಪ್ರೋಟೀನ್, ಲೋ-ಕ್ಯಾಲೋರಿ ಮತ್ತು ಸಕ್ಕರೆ ರಹಿತ ವಿಭಾಗಗಳ ಪೈಕಿ, ‘ಹೈ-ಪ್ರೋಟೀನ್’ ತಿನಿಸುಗಳು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಆಯ್ಕೆಯಾಗಿವೆ. ಸಕ್ಕರೆ ರಹಿತ ಆಹಾರಗಳ ಬೇಡಿಕೆ ವಾರ್ಷಿಕವಾಗಿ ಅತಿ ಹೆಚ್ಚು ಏರಿಕೆ ಕಂಡಿದೆ.
ಕ್ಯಾಂಪಸ್ ಬಳಕೆದಾರರಲ್ಲಿ ಶೇ. 44ಕ್ಕೂ ಹೆಚ್ಚು ಮಂದಿ ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ಹೆಲ್ತಿ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಸೆಪ್ಟೆಂಬರ್ 2026ರ ವೇಳೆಗೆ ಪ್ರತಿ ಮೂವರಲ್ಲಿ ಒಬ್ಬರಿಗಿಂತ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಈಟ್ರೈಟ್ ಆಹಾರ ತರಿಸಿಕೊಂಡಿದ್ದಾರೆ. ಒಟ್ಟು ಕ್ಯಾಂಪಸ್ ಆರ್ಡರ್ಗಳಲ್ಲಿ ಸುಮಾರು ಅರ್ಧದಷ್ಟು ಪಾಲು ಇಂಜಿನಿಯರಿಂಗ್ ಕಾಲೇಜುಗಳದ್ದಾಗಿದ್ದರೆ, ಆರೋಗ್ಯ ಪ್ರಜ್ಞೆಯಲ್ಲಿ ಮ್ಯಾನೇಜ್ಮೆಂಟ್ ಕ್ಯಾಂಪಸ್ಗಳು ಮುಂಚೂಣಿಯಲ್ಲಿವೆ.
ʼಡಬಲ್ ಎಗ್ ರೋಲ್ʼಗೆ ಬೇಡಿಕೆ
ವಿದ್ಯಾರ್ಥಿಗಳು ಬೆಳಗಿನ ಉಪಾಹಾರಕ್ಕೆ ಹೆಚ್ಚು ಆರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದು, ಮುಂಜಾನೆಯ ಪ್ರತಿ ನಾಲ್ಕು ಆರ್ಡರ್ಗಳಲ್ಲಿ ಒಂದು ಈಟ್ರೈಟ್ ವಿಭಾಗದ್ದಾಗಿರುತ್ತದೆ. ತಡರಾತ್ರಿ ವೇಳೆಯೂ ಆರೋಗ್ಯಕರ ಆಹಾರದ ಆರ್ಡರ್ ಶೇ. 10ರಷ್ಟು ಹೆಚ್ಚಾಗಿದ್ದು, ‘ಡಬಲ್ ಎಗ್ ರೋಲ್’ಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.
ಒಟ್ಟಾರೆ ರೋಲ್ಸ್, ಸ್ಯಾಂಡ್ವಿಚ್, ಬಿರಿಯಾನಿ, ಬರ್ಗರ್ ಹಾಗೂ ಡ್ರೈ ಸ್ಟಾರ್ಟರ್ಸ್ ಹೆಚ್ಚಾಗಿ ಮಾರಾಟವಾದರೆ, ಹೈ-ಪ್ರೋಟೀನ್ ವಿಭಾಗದಲ್ಲಿ ಚಿಕನ್ ಫ್ರೈಡ್ ರೈಸ್, ಪನೀರ್ ಟಿಕ್ಕಾ ಸ್ಯಾಂಡ್ವಿಚ್, ಇಂಡಿಯನ್ ತಂದೂರಿ ಚಿಕನ್ ರೋಲ್, ಕ್ರಿಸ್ಪಿ ಪೆರಿ ಪೆರಿ ಚಿಕನ್ ರೈಸ್ ಬೌಲ್ ಮತ್ತು ಕ್ಲಾಸಿಕ್ ಚಿಕನ್ ರೋಲ್ ವಿದ್ಯಾರ್ಥಿಗಳ ನೆಚ್ಚಿನ ಖಾದ್ಯಗಳಾಗಿವೆ.
ಮುಂಚೂಣಿಯಲ್ಲಿ ಐಐಟಿ ಬಾಂಬೆ
ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆಹಾರ ಸೇವನೆಯನ್ನು ಪ್ರೋತ್ಸಾಹಿಸಲು ಸ್ವಿಗ್ಗಿ ‘ಈಟ್ರೈಟ್ ಲೀಡರ್ಬೋರ್ಡ್’ ಆರಂಭಿಸಿದ್ದು, ಪ್ರತಿ ಕ್ಯಾಂಪಸ್ನ ಆರ್ಡರ್ಗಳ ಆಧಾರದ ಮೇಲೆ ಲೈವ್ ರ್ಯಾಂಕಿಂಗ್ ನೀಡುತ್ತಿದೆ. ಟಾಪ್ 20 ಕ್ಯಾಂಪಸ್ಗಳ ವಿದ್ಯಾರ್ಥಿಗಳಿಗೆ ಪ್ರತಿ ವಾರ 100 ರೂ. ಕೂಪನ್ ನೀಡಲಾಗುತ್ತಿದೆ.
ಅಕ್ಟೋಬರ್ 2026ರಲ್ಲಿ ಐಐಟಿ ಬಾಂಬೆ, ಕೆಐಐಟಿ ವಿವಿ, ಬಿಟ್ಸ್ ಪಿಲಾನಿ ಗೋವಾ, ಥಾಪರ್ ಇನ್ಸ್ಟಿಟ್ಯೂಟ್, ಐಐಟಿ ಮದ್ರಾಸ್ ಮತ್ತು ಮಣಿಪಾಲ ವಿವಿಗಳು ಅಗ್ರಸ್ಥಾನ ಪಡೆದಿವೆ. ಇನ್ನು ಎನ್ಐಎಫ್ಟಿ ಬೆಂಗಳೂರು, ಎನ್ಐಎಫ್ಟಿ ಚೆನ್ನೈ, ಜೇಪೀ ಇನ್ಸ್ಟಿಟ್ಯೂಟ್, ಐಐಟಿ ಭಿಲಾಯ್, ಎನ್ಐಎಫ್ಟಿ ಪಾಟ್ನಾ ಮತ್ತು ಗುಜರಾತ್ ವಿವಿಗಳಲ್ಲಿ ಸರಾಸರಿಗಿಂತ 6 ಪಟ್ಟು ಹೆಚ್ಚು ಬೆಳವಣಿಗೆ ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ವಿಗ್ಗಿಯ ಸ್ಟ್ರಾಟಜಿ ಮತ್ತು ಇನ್ವೆಸ್ಟ್ಮೆಂಟ್ಸ್ ವಿಭಾಗದ ಉಪಾಧ್ಯಕ್ಷ ನಿಖಿಲ್ ವ್ಯಾಸ್, “ಯುವ ಪೀಳಿಗೆ ಚಿಕ್ಕ ವಯಸ್ಸಿನಲ್ಲೇ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವುದು ಉತ್ತೇಜನಕಾರಿ. ಇದು ತಾತ್ಕಾಲಿಕ ಟ್ರೆಂಡ್ ಅಲ್ಲ, ಆಹಾರದ ಬಗೆಗಿನ ದೃಷ್ಟಿಕೋನದಲ್ಲಿ ಆಗಿರುವ ದೊಡ್ಡ ಬದಲಾವಣೆ. ಹಾಸ್ಟೆಲ್ ಹಾಗೂ ಕ್ಯಾಂಪಸ್ಗಳಿಗೆ ಸುಲಭವಾಗಿ ಪೌಷ್ಟಿಕ ಆಹಾರ ತಲುಪಿಸಲು ನಾವು ಬದ್ಧರಾಗಿದ್ದೇವೆ,” ಎಂದಿದ್ದಾರೆ.
2025ರ ಮಧ್ಯಭಾಗದಲ್ಲಿ ಆರಂಭವಾದ ಆರೋಗ್ಯಕರ ಆಯ್ಕೆಗಳನ್ನು ಒಗ್ಗೂಡಿಸಿ ಈ ವರ್ಷ ‘ಈಟ್ರೈಟ್’ ವಿಭಾಗವನ್ನು ರೂಪಿಸಲಾಗಿದ್ದು, ಸದ್ಯ 50 ನಗರಗಳಲ್ಲಿ 30 ಲಕ್ಷಕ್ಕೂ ಅಧಿಕ ಮೆನು ಐಟಂಗಳು ಲಭ್ಯವಿವೆ.








