ಶಿವಣ್ಣ ಹಾಗೂ ಪ್ರಭುದೇವ ನಟಿಸಿರುವ ಕರಟಕ ದಮನಕ ಚಿತ್ರದ ಕ್ಯಾರೆಕ್ಟರ್ ಟೀಸರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸದ್ಯ ಈ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯದಲ್ಲಿಯೇ ಟ್ರೇಲರ್ ಕೂಡ ಹೊರ ಬರಲಿದೆ. ಮಾರ್ಚ್ 8 ಮಹಾ ಶಿವರಾತ್ರಿ ಶುಭದಿನದಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಇತ್ತೀಚೆಗೆ ಚಿತ್ರದ ಎರಡನೇ ಗೀತೆ ಡೀಗ ಡಿಗರಿ ಅಬುದಾಬಿಯಲ್ಲಿ ಬಿಡುಗಡೆಯಾಗಿತ್ತು. ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಇದೆ. ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಯಾವಾಗಲೂ ಒಟ್ಟಿಗೆ ಇಬ್ಬರನ್ನು ಹೆಚ್ಚು ಸಲ ನೋಡಿದಾಗ ಅವರನ್ನು ಕರಟಕ ದಮನಕ ಎನ್ನುತ್ತಾರೆ. ಚಿತ್ರ ನೋಡಿದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಊರು, ಎಳೆದ ತೇರು ಹಾಗೂ ಅವನು ಯಾವ ನೀರು ಕುಡಿದು ಬೆಳೆದಿದ್ದಾನೋ ಆ ನೀರು ನೆನಪಾಗುತ್ತದೆ. ಪ್ರತಿಯೊಬ್ಬರಿಗೂ ಒಂದು ಊರು ಇರುತ್ತದೆ. ಊರು ಬಿಟ್ಟು ಬಂದ ಮೇಲೆ ಮರಳಿ ಅಲ್ಲಿಗೆ ಹೋದಾಗ ಸಾಕಷ್ಟು ಬದಲಾವಣೆಯಾಗಿರುತ್ತದೆ. ಇದನ್ನೇ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ.